

ದೇವದುರ್ಗ: ತಾಲೂಕಿನ ಕಾಕರಗಲ್ ಗ್ರಾಮದಲ್ಲಿ ಜನರ ವಿರೋಧದ ನಡುವೆಯೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಟೋಲ್‌ಗೇಟ್ ನಿರ್ಮಾಣ ಮಾಡಿದ್ದರಿಂದ ರೊಚ್ಚಿಗೆದ್ದ ಜನರು ಬುಧವಾರ ರಾತ್ರಿ ಪ್ರತಿಭಟನೆ ನಡೆಸಿ, ಟೋಲ್‌ಗೇಟ್ ಜಖಂಗೊಳಿಸಿದರು.
ಬೈಕ್, ಕಾರ್‌ನಲ್ಲಿ ಬಂದ ನೂರಾರು ಜೆಡಿಎಸ್ ಕಾರ್ಯಕರ್ತರು ಹಾಗೂ ಜನರು ಪ್ರತಿಭಟನೆ ನಡೆಸಿದರು. ಇದೇವೇಳೆ ಸ್ಥಳಕ್ಕೆ ಶಾಸಕಿ ಆಗಮಿಸಿದ್ದರಿಂದ ಪ್ರಚೋದನೆಗೊಂಡ ಹೋರಾಟಗಾರರು ಟೋಲ್‌ಗೇಟ್‌ನ ತಡೆಗೋಡೆ, ಬ್ಯಾರಿಕೇಡ್ ಮುರಿದಿದ್ದಾರೆ. ಸಿಸಿ ಕ್ಯಾಮರಾ ಕಿತ್ತೆಸೆದು, ಕಂಪ್ಯೂಟರ್, ಗೇಟ್‌ನ ಕಿಟಕಿ ಹಾಗೂ ಗ್ಲಾಸ್‌ಗೆ ಹಾನಿ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಗಬ್ಬೂರು ಠಾಣೆ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಾತಾವರಣ ತಿಳಿಗೊಳಿಸಿದ್ದಾರೆ.
ಪ್ರಕರಣ ಸಂಬಂಧ ಟೋಲ್‌ಗೇಟ್ ಮೇಲ್ವಿಚಾರಣೆಯಲ್ಲಿದ್ದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನವೀನ್‌ಕುಮಾರ, ಗಬ್ಬೂರು ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಶಾಸಕಿ ಸಹೋದರ ತಿಮ್ಮರೆಡ್ಡಿ ನಾಯಕ, ಶಾಸಕಿ ಮಗ ಸಂತೋಷ ನಾಯಕ, ಕಾರ್ಯಕರ್ತರಾದ ಸಲೀಂ ಕಾಕರಗಲ್, ರಾಚಣ್ಣ ನಾಯಕ, ರಾಮಣ್ಣ ನಾಯಕ, ಭೀಮಣ್ಣ ನಾಯಕ, ಹನುಮಂತ್ರಾಯ ನಾಯಕ, ಬಸವರಾಜ್ ಮುಕ್ಕಲ್, ಅನಂತಯ್ಯ ತಿಮ್ಮಯ್ಯ ಕಾಕರಗಲ್, ಪ್ರಭು ನಾಯಕ, ಇಸಾಕ್ ಮೇಸ್ತ್ರಿ, ಶಿವರಾಜ್ ಕಾಲಿಗಾರ್, ಶಿವಕುಮಾರ್ ಮಸೀದಾಪುರ, ಮೊಹಮ್ಮದ್ ಅಲಿ ಸುಂಕೇಶ್ವರಹಾಳ ವಿರುದ್ಧ ಕೇಸ್ ದಾಖಲಾಗಿದೆ ಎಂದು ಪಿಎಸ್‌ಐ ಗಂಗಪ್ಪ ಬುರ್ಲಿ ತಿಳಿಸಿದ್ದಾರೆ.
ಹೋರಾಟದ ಎಚ್ಚರಿಕೆ: ಕಲ್ಮಲಾ-ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಎರಡು ಟೋಲ್‌ಗೇಟ್‌ಗಳನ್ನು ತೆರವು ಮಾಡುವಂತೆ ವಿವಿಧ ಸಂಘಟನೆಗಳು ಒತ್ತಾಯಿಸಿವೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರಾಜ್ಯ ರೈತ ಸಂಘ, ಅಖಂಡ ದೇವದುರ್ಗ ಹೋರಾಟ ಸಮಿತಿ, ಕನ್ನಡ ಪರ ಸಂಘಟನೆಗಳು ಜನರ ಹಿತದೃಷ್ಟಿಯಿಂದ ಟೋಲ್‌ಗೇಟ್ ಬಂದ್ ಮಾಡುವಂತೆ ಆಗ್ರಹಿಸಿದ್ದಾರೆ. ತಾಲೂಕು ಅತ್ಯಂತ ಹಿಂದುಳಿದಿದ್ದು, ಜನರು ಗುಳೆ ಹೋಗುತ್ತಿದ್ದಾರೆ. ಇಂಥ ಪ್ರದೇಶದಲ್ಲಿ ಟೋಲ್ ನಿರ್ಮಾಣ ಸರಿಯಲ್ಲ. ಟೋಲ್‌ಗೇಟ್ ತೆರವು ಮಾಡದಿದ್ದರೆ ದೊಡ್ಡಮಟ್ಟದ ಹೋರಾಟ ನಡೆಸುವುದಾಗಿ ಸಂಘಟನಾಕರರು ಎಚ್ಚರಿಸಿದ್ದಾರೆ.