

ದೇವದುರ್ಗ: ತಾಲೂಕಿನ ಜಾಲಹಳ್ಳಿ ಹಾಗೂ ಕಾಕರಗಲ್‌ನಲ್ಲಿ ಸದ್ದಿಲ್ಲದೆ ಟೋಲ್‌ಗೇಟ್ ಆರಂಭಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕುತಂತ್ರ ನಡೆಸಿದ್ದಾರೆ. ಗೇಟ್ ಆರಂಭಿಸಿದರೆ ರಾಜ್ಯ ಹೆದ್ದಾರಿ ಸಂಚಾರ ಬಂದ್ ಮಾಡಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ (ಕೋಡಿಹಳ್ಳಿ ಬಣ) ತಾಲೂಕು ಅಧ್ಯಕ್ಷ ಮರಿಲಿಂಗ ಪಾಟೀಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಸದ್ದಿಲ್ಲದೆ ತಾಲೂಕಿನ ಜನರ ಕತ್ತುಹಿಸುಕಲು ಮುಂದಾಗಿದೆ. ನಾಟಿ ಮಾಡುವಾಗ, ಫಸಲು ಬಂದಾಗ, ಭತ್ತ, ತೊಗರಿ ಬೆಳೆದು ಕಟಾವು ಮಾಡುವಾಗ, ಬೆಳೆಗಳನ್ನು ಮಾರಾಟ ಮಾಡುವಾಗ ರೈತರ ವಾಹನಗಳು ದಿನಕ್ಕೆ ಹತ್ತಾರು ಬಾರಿ ಓಡಾಡುತ್ತವೆ. ಪ್ರತಿಸಲವೂ ಟೋಲ್ ಕಟ್ಟಬೇಕಾಗುತ್ತದೆ. ಹಳ್ಳಿಗಳ ಕೂಲಿಕಾರರು, ಬಡವರು ದುಡಿಯಲು ಬರುತ್ತಿದ್ದು ಅವರಿಗೆ ಟೋಲ್‌ನಿಂದ ತೀವ್ರ ಸಮಸ್ಯೆಯಾಗಲಿದೆ.
ಅಭಿವೃದ್ಧಿ ಹೊಂದಿದ ತಾಲೂಕು, ಅತಿಹೆಚ್ಚು ವಾಹನಗಳ ಓಡಾಟವಿರುವ ರಸ್ತೆಯಲ್ಲಿ ಟೋಲ್‌ಗೇಟ್ ಆರಂಭಿಸಿದರೆ ಅದಕ್ಕೊಂದು ಅರ್ಥವಿದೆ. ಆದರೆ, ನಮ್ಮಲ್ಲಿ ತಾಲೂಕಿನ ಜನರು ಬಿಟ್ಟರೆ ಬೇರ‌್ಯಾರೂ ಓಡಾಡುವುದಿಲ್ಲ. ಹೇಳಿಕೊಳ್ಳುವಂಥ ರಸ್ತೆ ಅಭಿವೃದ್ಧಿ ಮಾಡಿಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ರಾಯಚೂರು, ಸಿಂಧನೂರು, ಮಾನ್ವಿ, ಲಿಂಗಸುಗೂರು ತಾಲೂಕು ಬಿಟ್ಟು ಹಿಂದುಳಿದ ನಮ್ಮ ತಾಲೂಕಿನಲ್ಲೇ ಟೋಲ್‌ಗೇಟ್ ಮಾಡುತ್ತಿರುವುದು ರಾಜಕೀಯ ಕುತಂತ್ರವೇ ಕಾರಣ ಎಂದು ಆರೋಪಿಸಿದರು.
ಶಾಸಕಿ ಕರೆಮ್ಮ ಜಿ.ನಾಯಕ, ಸಂಸದ ಜಿ.ಕುಮಾರನಾಯಕ ಸೇರಿ ಮೂರು ಪಕ್ಷದ ನಾಯಕರು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಟೋಲ್‌ಗೇಟ್ ರದ್ದುಮಾಡಬೇಕು. ನಿರ್ಲಕ್ಷ್ಯಮಾಡಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಪ್ರಮುಖರಾದ ಮಲ್ಲೇಶ ನಾಯಕ, ರಮೇಶ ನಾಯಕ, ಆಂಜನೇಯ ಚಿಕ್ಕಬೂದೂರು, ನಾಗರಾಜ, ಮಾರುತಿ, ಭೀಮನಗೌಡ, ವೆಂಕಟೇಶ್, ಶರಣಬಸವ ಇದ್ದರು.