ಖಾತ್ರಿಯಲ್ಲಿ ಲೋಪ ನಡೆದಿದ್ದರೆ ಸೂಕ್ತ ಕ್ರಮ - ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ನಿರ್ದೇಶಕ ಪಿ.ಶಿವಶಂಕರ ಹೇಳಿಕೆ

ದೇವದುರ್ಗ ತಾಲೂಕು ಜಾಲಹಳ್ಳಿಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ನಿರ್ದೇಶಕ ಪಿ.ಶಿವಶಂಕರ ನೇತೃತ್ವದ ತಂಡ ಭೇಟಿ ನೀಡಿ ಕೂಲಿಕಾರರ ಸಮಸ್ಯೆ ಆಲಿಸಿತು. ಜಿಪಂ ಯೋಜನಾ ನಿರ್ದೇಶಕ ಶರಣಬಸವ ಕೆಸರಟ್ಟಿ, ತಾಪಂ ಇಒ ಬಸವರಾಜ ಹಟ್ಟಿ, ಪಿಡಿಒ ನರಸಪ್ಪ ಇತರರಿದ್ದರು.
ದೇವದುರ್ಗ ತಾಲೂಕು ಜಾಲಹಳ್ಳಿಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ನಿರ್ದೇಶಕ ಪಿ.ಶಿವಶಂಕರ ನೇತೃತ್ವದ ತಂಡ ಭೇಟಿ ನೀಡಿ ಕೂಲಿಕಾರರ ಸಮಸ್ಯೆ ಆಲಿಸಿತು. ಜಿಪಂ ಯೋಜನಾ ನಿರ್ದೇಶಕ ಶರಣಬಸವ ಕೆಸರಟ್ಟಿ, ತಾಪಂ ಇಒ ಬಸವರಾಜ ಹಟ್ಟಿ, ಪಿಡಿಒ ನರಸಪ್ಪ ಇತರರಿದ್ದರು.
Published on

ದೇವದುರ್ಗ: ತಾಲೂಕಿನ ಜಾಲಹಳ್ಳಿ ಗ್ರಾಪಂ ವ್ಯಾಪ್ತಿಯ ಹುತ್ತಿನ ಯಲ್ಲಮ್ಮ ದೇವಸ್ಥಾನ, ಗುಡ್ಡದ ಕಂದಕದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ನಿರ್ದೇಶಕ ಪಿ.ಶಿವಶಂಕರ ನೇತೃತ್ವದ ಬಾಲಮುರುಳಿ, ಅರವಿಂದ ಕುಮಾರ ಅವರ ತಂಡ ಬುಧವಾರ ಭೇಟಿ ನೀಡಿ ಪರಿಶೀಲಿಸಿತು.

ನರೇಗಾ ಕಾಮಗಾರಿಗೆ ಅರ್ಜಿ ಸಲ್ಲಿಸಿದ್ದ 150 ಜನರ ಪೈಕಿ 32 ಕೂಲಿಕಾರರು ಹಾಜರಿರುವುದನ್ನು ಕಂಡ ನಿರ್ದೇಶಕ ಪಿ.ಶಿವಶಂಕರ ಅವರು, ಗ್ರಾಪಂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಕಾಮಗಾರಿಗೂ ಮುನ್ನ ಸ್ಥಳ ಜಿಪಿಎಸ್ ಮಾಡಬೇಕು. ಹಾಜರಾತಿ ದಾಖಲೆ ಇರಿಸಬೇಕು ಎಂದು ತಾಕೀತು ಮಾಡುತ್ತಿದ್ದಂತೆಯೇ ತಾಪಂ ಎಡಿ ಅಣ್ಣರಾವ್ ಅವರು, ಕೆಲಸ ಪೂರ್ಣಗೊಂಡ ನಂತರ ಅಳತೆ ಮಾಡಿ ಕೂಲಿ ಸಂದಾಯ ಮಾಡುತ್ತೇವೆ ಎಂದು ತಿಳಿಸಿದರು.

ಕೂಲಿಕಾರರಿಂದ ದೂರು: ನಿಮಗೆ ಕೂಲಿಹಣ ಎಷ್ಟು ದಿನಗಲ್ಲಿ ಸಿಗುತ್ತದೆ ? ಎಷ್ಟು ದಿನಗಳಿಂದ ಕೆಲಸ ಮಾಡುತ್ತಿದ್ದೀರಿ ? ಕುಡಿವ ನೀರಿನ ವ್ಯವಸ್ಥೆ ಮಾಡಿದ್ದಾರಾ ? ಮನೆಯಿಂದ ಹೇಗೆ ಬರುತ್ತೀರಿ ? ಎಂದು ಕೂಲಿಕಾರರನ್ನು ಹಿಂದಿಯಲ್ಲಿ ಪ್ರಶ್ನಿಸಿದಾಗ, ಭಾಷೆ ಅರ್ಥವಾಗದ ಕಾರಣ ಅಧಿಕಾರಿಗಳ ಮೇಲೆ ಕೂಲಿಕಾರರು ಸಿಡಿಮಿಡಿಗೊಂಡರು. ಸ್ಥಳೀಯ ಅಧಿಕಾರಿಗಳು ಕನ್ನಡದಲ್ಲಿ ಕೇಳಿದಾಗ ಕೆಲವರು ಉತ್ತರ ನೀಡಿದರೆ, ಇನ್ನು ಕೆಲವರು ‘ಕೂಲಿಕಾರರಿಗೆ ಸಮರ್ಪಕವಾಗಿ ಕಾಮಗಾರಿ ಹಾಗೂ ಕೂಲಿ ಹಣ ಪಾವತಿ ಮಾಡುವುದಿಲ್ಲ, ಸಿಬ್ಬಂದಿ ಕೂಲಿಕಾರರೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ. ಕೆಲವರಿಗೆ ಜಾಬ್‌ಕಾರ್ಡ್ ಕೊಟ್ಟಿಲ್ಲ’ ಎಂದು ಗ್ರಾಪಂ ಸಿಬ್ಬಂದಿ ವಿರುದ್ಧ ದೂರಿದರು.

ಲೋಪ ನಡೆದರೆ ಕ್ರಮ: ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ನರೇಗಾ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆ ಸಮರ್ಪಕ ನಿರ್ವಹಣೆಗೆ ಅನುಷ್ಠಾನ ಸಮಿತಿಯಿದ್ದು, ಕಾಲಕಾಲಕ್ಕೆ ಪರಿಶೀಲನೆ ಮಾಡಲಿದೆ. ಆ ವರದಿ ಸತ್ಯಾಸತ್ಯತೆ ಹಾಗೂ ದೂರುಗಳ ಬಗ್ಗೆ ಪರಿಶೀಲಿಸಲು ನಾವು ಬಂದಿದ್ದೇವೆ. ತಾಲೂಕಿನಲ್ಲಿ ಈ ಹಿಂದೆ ನಡೆದ ನರೇಗಾ ಅವ್ಯವಹಾರದ ಬಗ್ಗೆ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಇನ್ನು ಹಲವು ವಿಷಯಗಳು ತನಿಖಾ ಹಂತದಲ್ಲಿವೆ. ದಾಖಲೆ ಹಾಗೂ ಕಾಮಗಾರಿ ಸ್ಥಳ ಪರಿಶೀಲಿಸಿ ಲೋಪ ನಡೆದಿದ್ದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ನಿರ್ದೇಶಕ ಪಿ.ಶಿವಶಂಕರ ಹೇಳಿದರು.

ನಂತರ ಗ್ರಾಪಂ ಕಚೇರಿಗೆ ತೆರಳಿ ಎರಡು ವರ್ಷದಲ್ಲಿ ಕೈಗೊಂಡ ನರೇಗಾ ಕಾಮಗಾರಿಗಳನ್ನು ಮತ್ತು ಬಾಲಕಿಯರ ಶಾಲೆ, ಮುರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಗ್ರಂಥಾಲಯಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಜಿಪಂ ಯೋಜನಾ ನಿರ್ದೇಶಕ ಶರಣಬಸವ ಕೆಸರಟ್ಟಿ, ತಾಪಂ ಇಒ ಬಸವರಾಜ ಹಟ್ಟಿ, ಪಿಡಿಒ ನರಸಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net