ಮಠಗಳಿಂದ ಸಮಾಜಮುಖಿ ಕಾರ್ಯ ನಿರಂತರ-ಕಾಶಿಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ

Devadurga gabbur kashi sri dharmasabhe
ದೇವದುರ್ಗ ತಾಲೂಕು ಗಬ್ಬೂರಿನಲ್ಲಿ ಆಯೋಜಿಸಿದ್ದ ಜೀರ್ಣೋದ್ಧಾರಗೊಂಡ ಶ್ರೀ ಮೇಲು ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಪಂಚಲಿಂಗ ಪ್ರತಿಷ್ಠಾಪನೆ ಹಾಗೂ ಧರ್ಮಸಭೆಯನ್ನು ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ, ಗಣೇಕಲ್ ಶ್ರೀ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಕಿಲ್ಲೇ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಶ್ರೀ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಸುಲ್ತಾನಪುರದ ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಇದ್ದರು.
Published on

ದೇವದುರ್ಗ: ಧಾರವಾಡದಲ್ಲಿ ಎಲ್ಲೆನಿಂತು ಕಲ್ಲು ಎಸೆದರೂ ಕವಿಗಳ ಮನೆಗೆ ಬೀಳುವಂತೆ ಗಬ್ಬೂರಿನಲ್ಲಿ ನಿಂತುಕಲ್ಲು ಎಸೆದರೂ ಮಠ ಇಲ್ಲವೆ ಮಂದಿರಕ್ಕೆ ಬೀಳುತ್ತೆ. ಅಷ್ಟೊಂದು ಪುಣ್ಯಸ್ಥಗಳು ಇಲ್ಲಿದ್ದು ಗಬ್ಬೂರು ಶ್ರೀಕ್ಷೇತ್ರ ಎರಡನೇ ಹಂಪಿಯಾಗಿದೆ ಎಂದು ಕಾಶಿಪೀಠದ ಜಗದ್ಗುರು ಶ್ರೀ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಗಬ್ಬೂರಿನಲ್ಲಿ ಆಯೋಜಿಸಿದ್ದ ಜೀರ್ಣೋದ್ಧಾರ ಗೊಂಡ ಶ್ರೀಮೇಲು ಶಂಕರಲಿಂಗೇಶ್ವರ ದೇವಸ್ಥಾನ ಪಂಚಲಿಂಗ ಮೂರ್ತಿ ಪ್ರತಿಷ್ಠಾಪನೆ, ಧರ್ಮಸಭೆ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವ ಉದ್ಘಾಟಿಸಿ ಸೋಮವಾರ ಮಾತನಾಡಿದರು. 400ವರ್ಷಗಳ ಹಿಂದೆ ನೂರಾರು ದೇವಸ್ಥಾನ, ಮಠ ಮಂದಿರಗಳು ನಿರ್ಮಾಣವಾಗಿವೆ. ಶ್ರೀಮೇಲು ಶಂಕರಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಮಹತ್ವದ ಕಾರ್ಯವಾಗಿದೆ. ಇಲ್ಲಿನ ನಂದಿ ವಿಗ್ರಹ ಶ್ರೀಶೈಲದ ನಂದಿಯಂತೆ ಕಾಣಿಸುತ್ತಿದೆ. ಹಂಪಿ, ಕಾಶಿಗೆ ಬರಲಾಗದ ಭಕ್ತರು ಗಬ್ಬೂರು ಸುತ್ತಾಡಿದರೆ ಅಲ್ಲಿನ ದರ್ಶನವಾಗುತ್ತದೆ.

ಪಂಚಪೀಠಗಳಲ್ಲಿ ಉಜ್ಜಿಯಿನಿ, ಶ್ರೀಶೈಲ, ಕಾಶಿಪೀಠ, ರಂಭಾಪುರಿ, ಕೇದಾರಪೀಠ ಭಕ್ತರಿಂದಲೇ ಇಂದು ಜಗತ್ ಪ್ರಸಿದ್ಧಿಯಾಗಿದೆ. ಭಕ್ತರೇ ಪೀಠ ಕಟ್ಟಿದ್ದು ನಮಗೆ ಜವಾಬ್ದಾರಿಯನ್ನು ಮಾತ್ರ ನೀಡಿದ್ದಾರೆ. ಸರ್ವ ಧರ್ಮಗಳ ಈ ನಾಡಿನಲ್ಲಿ ಮಠಮಾನ್ಯಗಳಿಗೆ ಉನ್ನತ ಸ್ಥಾನಮಾನವಿದೆ. ಅದನ್ನು ಸ್ವಾಮೀಜಿಗಳು ಉಳಿಸಿಕೊಂಡು ಹೋಗಬೇಕಿದೆ. ಧಾರ್ಮಿಕ ಕಾರ್ಯಕ್ರಮ ಜತೆಗೆ ಸಮಾಜಮುಖಿ ಕೆಲಸವನ್ನು ಮಠಗಳು ಮಾಡುತ್ತಿವೆ. ಇಂಥ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.

ಜಾಲಹಳ್ಳಿಯ ಶ್ರೀಜಯಶಾಂತಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ದೇವರ ಸ್ಮರಣೆ ಮನುಷ್ಯನ ಬದುಕಿಗೆ ಮುಕ್ತಿಯಾಗಿದೆ. ಜಾಲಹಳ್ಳಿಯ ಶ್ರೀಗಳು ಕಾಶಿಪೀಠದ ಜವಾಬ್ದಾರಿ ಹೊತ್ತಿರುವುದು ಜಿಲ್ಲೆಯ ಭಕ್ತಿಮಾರ್ಗದ ಸುವರ್ಣಯುಗ ಆರಂಭವಾಗಿದೆ. ಮನುಷ್ಯನಿಗೆ ಇಬ್ಬರು ದೇವರ ಆಶೀರ್ವಾದ ಬಹಳಮುಖ್ಯ. ದೇವರು ಹಾಗೂ ನಿಸರ್ಗ. ಭಗವಂತ ಜೀವಕೊಟ್ಟರೆ ನಿಸರ್ಗ ಬದುಕಲು ಅವಕಾಶ ನೀಡಿದೆ. ಮನುಷ್ಯ ನಿಸರ್ಗದಿಂದ ಪಾಠ ಕಲಿತು ಮರದಂತೆ ಬದುಕಬೇಕಿತ್ತು. ಆದರೆ ಮರವನ್ನು ಪೂಜಿಸುವ ಬದಲು ನಾಶ ಮಾಡುತ್ತಿರುವುದು ವಿಷಾದನೀಯ. ಮನುಷ್ಯನ ನಾಶಕ್ಕೆ ಮನುಷ್ಯನೇ ಕಾರಣನಾಗುತ್ತಾನೆ. ಸತ್ಯ ತಿಳಿದು ನಿಸರ್ಗ ಹಾಗೂ ದೇವರ ಪೂಜೆ ಮಾಡಬೇಕು ಎಂದರು.

ನವಲಕಲ್ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಶಿಖರಮಠದ ಶ್ರೀ ಕಪಿಲಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ, ಗಣೇಕಲ್‌ನ ಶ್ರೀ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಖಾನಾಪುರದ ಶ್ರೀ ವೀರ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ವೀರಗೋಟದ ಶ್ರೀ ಅಡವಿಲಿಂಗ ಮಹಾರಾಜರು ಇದ್ದರು. ಇದಕ್ಕೂ ಮುನ್ನ ಶ್ರೀಮೇಲು ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ, ಬಿಲ್ವಾರ್ಚನೆ, ಪಂಚಮೂರ್ತಿಗಳ ಪ್ರತಿಷ್ಠಾಪನೆ ಜರುಗಿದವು. ಊರೊಳಗಿನ ದೇವಸ್ಥಾನದಿಂದ ಶ್ರೀ ಮಠದವರೆಗೆ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಭಗವತ್ಪಾದರ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು.

ಹಳೇ ನೆನಪು ಮೆಲುಕು

ಜಗತ್ ಪ್ರಸಿದ್ಧ ಕಾಶಿಪೀಠದ ಜವಾಬ್ದಾರಿ ದೊರೆತಿರುವುದು ನಮ್ಮ ಪೂರ್ವಜರ ಪುಣ್ಯಫಲ. ರಾಯಚೂರು ಜಿಲ್ಲೆಗೆ ಕಾಶಿಪೀಠದ ಜವಾಬ್ದಾರಿ ದೊರೆಯಬೇಕು ಎನ್ನುವುದು ಜಗನ್ನಾಥನ ಇಚ್ಛೆಯಾಗಿತ್ತು. ನಾನು ಜಾಲಹಳ್ಳಿಯಲ್ಲೇ ಆಡಿಬೆಳೆದು ಶಿಕ್ಷಣ ಪಡೆದು ಜಗದರಾಧ್ಯರ ಆಶೀರ್ವಾದ ಪಡೆದಿದ್ದು ಶ್ರೀ ಜಯಶಾಂತ ಸ್ವಾಮೀಜಿ ಆಶಯದಂತೆ ವಟಗಿಮಠ ಜವಾಬ್ದಾರಿ ತೆಗೆದುಕೊಂಡು ಭಕ್ತರ ಒಡನಾಟದಲ್ಲೇ ಬೆಳೆದಿದ್ದೇನೆ. ಶ್ರೀ ಬೂದಿಬಸವ ಸ್ವಾಮೀಜಿ ತಿರುಪತಿಯಲ್ಲಿ ಒಡನಾಡಿಯಾಗಿದ್ದು ಉನ್ನತ ಶಿಕ್ಷಣ ಪಡೆಯುವಾಗ ಶ್ರೀ ಗಳು ಭವಿಷ್ಯ ನುಡಿದಿದ್ದರು. ಕಾಶಿಪೀಠದ ಜವಾಬ್ದಾರಿ ನಿಮಗೆ ಬರಲಿದೆ ಎಂದಿದ್ದ ಮಾತು ನಿಜವಾಗಿದೆ. ಇಂದು ಅದೇ ಪೀಠದ ಮುಂದೆ ಜಿಲ್ಲೆಯ ಮೊದಲ ಕಾರ್ಯಕ್ರಮ ನಡೆಯುತ್ತಿರುವುದು ನನ್ನ ಸೌಭಾಗ್ಯ. ನನಗಲ್ಲ ರಾಯಚೂರು ಜಿಲ್ಲೆಗೆ ಕಾಶಿಪೀಠದ ಜವಾಬ್ದಾರಿ ದೊರೆತಿದೆ ಎಂದು ವಾರಣಾಸಿ ಕಾಶಿಪೀಠದ ಜಗದ್ಗುರು ಶ್ರೀ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗಬ್ಬೂರಿನಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಮೇಲು ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಪಂಚಲಿಂಗ ಪ್ರತಿಷ್ಠಾಪನೆ ಹಾಗೂ ಧರ್ಮಸಭೆಯಲ್ಲಿ ಭಾಗವಹಿಸಿದ್ದ ಭಕ್ತರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net