

ದೇವದುರ್ಗ: ಕ್ಷಯಮುಕ್ತ ಭಾರತ ನಿರ್ಮಾಣಕ್ಕೆ ಸರ್ಕಾರ ಯೋಜನೆ ರೂಪಿಸಿದ್ದು, ಆರೋಗ್ಯ ಇಲಾಖೆ ಜಾರಿಗೆ ತಂದಿರುವ ನಿಕ್ಷಯಮಿತ್ರ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ವೈದ್ಯಾಧಿಕಾರಿ ಸಿದ್ದರಾಮೇಶ ಹೇಳಿದರು.
ತಾಲೂಕಿನ ಗಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ವಿಭಾಗ, ಶಿಲ್ಪಾ ಮೆಡಿಕೇರ್ ಹಾಗೂ ಫೌಂಡೇಷನ್‌ನಿಂದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಜಾಗೃತಿ ಹಾಗೂ ರೋಗಿಗಳಿಗೆ ನ್ಯೂಟ್ರಿಷನ್ ಪೌಡರ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶ ಬೆಂಬಲ ನೀಡಲು ನಿಕ್ಷಯಮಿತ್ರ ಯೋಜನೆಯಡಿ ನ್ಯೂಟ್ರಿಷನ್ ಪೌಡರ್ ವಿತರಿಸಲಾಗುತ್ತಿದೆ. ಯೋಜನೆಯಡಿ ರೋಗಿಗಳನ್ನು ದತ್ತು ಪಡೆದು ನ್ಯೂಟ್ರಿಷನ್ ಪೌಡರ್‌ಗಳನ್ನು ಕೊಡಿಸಬೇಕು. ಆರು ತಿಂಗಳ ಕಾಲ ಪೌಷ್ಟಿಕ ಆಹಾರ ಕಿಟ್ ನೀಡಿ ರೋಗಿಗಳು ಕ್ಷಯದಿಂದ ಮುಕ್ತವಾಗಲು ಸಹಕರಿಸಬೇಕು ಎಂದರು.
ಜಿಲ್ಲಾ ಕ್ಷಯರೋಗ ಮೇಲ್ವಿಚಾರಕ ಪ್ರವೀಣಕುಮಾರ ಹಿರೇಮಠ ಮಾತನಾಡಿ, ಕ್ಷಯ ರೋಗ ಬ್ಯಾಕ್ಟೀರಿಯಾದಿಂದ ಬರುವ ಕಾಯಿಲೆಯಾಗಿದೆ. ಸಾರ್ವಜನಿಕರು ರೋಗದ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು. 15 ದಿನಗಳ ನಿರಂತರ ಕೆಮ್ಮು, ಕಫ ಬೀಳುವುದು, ಸಂಜೆಯಾದರೆ ಜ್ವರ ಬರುವುದು, ಊಟ ಸೇರದೆ ಇರುವುದು, ಕಫದಲ್ಲಿ ರಕ್ತ ಬೀಳುವುದು, ತೂಕ ಕಡಿಮೆಯಾಗುವುದು ರೋಗದ ಲಕ್ಷಣಗಳಾಗಿವೆ ಎಂದರು.