

ದೇವದುರ್ಗ: ಪರಿಸರ ಉಳಿಸಿ ಬೆಳೆಸುವ ದೃಷ್ಟಿಯಿಂದ ಅರಣ್ಯ ಇಲಾಖೆ ಕೋಟ್ಯಂತರ ರೂ. ಖರ್ಚು ಮಾಡಿ ನೆಟ್ಟಿರುವ ಗಿಡಗಳು ಬೆಂಕಿಗೆ ಆಹುತಿಯಾಗುತ್ತಿವೆ. ರೈತರಿಗೆ ಅರಣ್ಯ ಇಲಾಖೆ ಜಾಗೃತಿ ಮೂಡಿಸದ ಕಾರಣ ರಸ್ತೆ ಬದಿ ನೆಟ್ಟ ಸಸಿಗಳು ಹಾಳಾಗುತ್ತಿವೆ.
ಪಟ್ಟಣ ಸೇರಿ ತಾಲೂಕಿನ ಪ್ರಮುಖ ರಸ್ತೆಗಳು, ರಾಜ್ಯ ಹೆದ್ದಾರಿಯಲ್ಲಿ ಲಕ್ಷಾಂತರ ಗಿಡಗಳನ್ನು ನೆಟ್ಟಿದ್ದು, ಹಲವು ಹೆಮ್ಮರವಾಗಿ ಬೆಳೆದಿವೆ. ಆದರೆ, ರೈತರು ತಮ್ಮ ಜಮೀನು ಸ್ವಚ್ಛ ಮಾಡಲು ಬದುವು, ಮುಳ್ಳು, ಕಸ ಹಾಗೂ ನಿರುಪಯುಕ್ತ ವಸ್ತುಗಳನ್ನು ಸುಡುತ್ತಿದ್ದು, ಬೇಸಿಗೆ ಧಗೆಗೆ ಕಿ.ಮೀ.ವರೆಗೂ ಬೆಂಕಿ ಹರಡುತ್ತಿದೆ.
ಕೆಲ ವರ್ಷಗಳ ಹಿಂದೆ ಕಲ್ಮಲಾ-ತಿಂಥಣಿ ರಾಜ್ಯ ಹೆದ್ದಾರಿಯಲ್ಲಿ ಸಾವಿರಾರು ಗಿಡಗಳನ್ನು ಹಾಕಲಾಗಿದ್ದು, ಹಲವು ದೊಡ್ಡವಾಗಿವೆ. ಒಣಗಿದ ಗಿಡಗಳ ಜಾಗದಲ್ಲಿ ಹೊಸದಾಗಿ ಗಿಡಗಳನ್ನು ನೆಡಲಾಗಿದೆ. ಆದರೆ, ಹಲವೆಡೆ ಬೆಂಕಿಗೆ ಹಾಳಾಗಿವೆ. ಇನ್ನು ದೇವದುರ್ಗ-ಶಹಾಪುರ ರಸ್ತೆ, ಕೊಪ್ಪರ-ಗೂಗಲ್, ಅಮರಾಪುರ-ಗಲಗ, ಮಸರಕಲ್ ಕ್ರಾಸ್-ಸಿರವಾರ ರಸ್ತೆ, ಜಾಲಹಳ್ಳಿ-ಗಲಗ, ಜಾಲಹಳ್ಳಿ-ಲಿಂಗದಹಳ್ಳಿ ಸೇರಿ ಹಲವೆಡೆ ರಸ್ತೆಯ ಎರಡೂ ಬದಿಗೆ ವಿವಿಧ ಗಿಡಗಳನ್ನು ಹಾಕಲಾಗಿದೆ.
ಅರಣ್ಯ ಇಲಾಖೆ ಸಸಿ ನೆಟ್ಟು, ಎರಡ್ಮೂರು ವರ್ಷ ಕಾಳಜಿ ಮಾಡಿ, ಗಿಡಗಳು 8-10 ಅಡಿ ಬೆಳೆದ ನಂತರ ಮರೆತು ಬಿಡುತ್ತದೆ. ಇನ್ನು ಖಾಲಿ ಜಾಗ, ಅರಣ್ಯ ಪ್ರದೇಶದಲ್ಲಿ ನೆಟ್ಟಿರುವ ಗಿಡಗಳು ಕೂಡ ಉಪಚಾರವಿಲ್ಲದೆ ಮರೆಯಾಗಿವೆ. ನೆಟ್ಟ ಗಿಡಗಳಲ್ಲಿ ಅರ್ಧದಷ್ಟು ದನಗಳ ಹಾವಳಿ, ನೀರಿನ ಕೊರತೆಯಿಂದ ಹಾಳಾಗಿದ್ದರೆ, ಉಳಿದವು ಬೆಂಕಿಗಾಹುತಿಯಾಗುತ್ತಿವೆ.
ರೈತರು ಭತ್ತದ ಹುಲ್ಲು, ಮೇವು ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದು, ರಸ್ತೆಯ ಎರಡೂ ಬದಿಗೆ ಬೀಳುತ್ತಿದೆ. ಬಿಸಿಲು ಹೆಚ್ಚಿರುವ ಕಾರಣ ಸೇದಿ ಬಿಸಾಡಿದ ಬೀಡಿ, ಸಿಗರೇಟ್‌ನಿಂದಲೂ ಬೆಂಕಿ ಹತ್ತಿಕೊಳ್ಳುತ್ತಿದೆ. ಹೂವಿನಹೆಡಗಿ, ಕೊಪ್ಪರ, ಯರಮಸಾಳ, ಅಮರಾಪುರ, ಗಲಗ, ಜಾಲಹಳ್ಳಿಯ ರಸ್ತೆಯಲ್ಲಿ ಬೆಂಕಿ ಹಚ್ಚಿದ್ದರಿಂದ ಒಂದೆರಡು ಕಿ.ಮೀ.ವರೆಗೆ ಬೆಂಕಿ ತಗುಲಿದೆ. ಇದರಿಂದ ಗಿಡಗಳು, ಕೆಲಕಡೆ ಮರಗಳು ಸುಟ್ಟಿವೆ.