

ದೇವದುರ್ಗ: ಸತತ ಮಳೆಯಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆಹಾನಿಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಬೆಳೆಹಾನಿ ಸಮೀಕ್ಷೆ ಮಾಡಿ ಜಿಲ್ಲಾಡಳಿತಕ್ಕೆ ವರದಿ ನೀಡುವಂತೆ ಶಾಸಕಿ ಕರೆಮ್ಮ ಜಿ.ನಾಯಕ ಸೂಚಿಸಿದರು.
ತಾಲೂಕಿನ ಚಿಂಚೋಡಿ, ಮಸರಕಲ್ ಸೇರಿ ವಿವಿಧ ಗ್ರಾಮಗಳ ಜಮೀನಿಗೆ ಶುಕ್ರವಾರ ಭೇಟಿ ನೀಡಿ ಬೆಳೆಹಾನಿ ಪರಿಶೀಲಿಸಿ ಮಾತನಾಡಿದರು. ತಾಲೂಕಿನಲ್ಲಿ ಸಾವಿರಾರು ರೈತರ ಬೆಳೆಗಳು ಹಾಳಾಗಿವೆ.
ಸರ್ಕಾರ ನೀಡುವ ಬೆಳೆ ಪರಿಹಾರ ಕಡಿಮೆಯಿದ್ದು, ರೈತರು ವ್ಯಯಿಸಿದ ಹಣಕ್ಕೂ ಸಾಲಲ್ಲ. ಸರ್ಕಾರ ವಿಶೇಷವೆಂದು ಪರಿಗಣಿಸಿ ರೈತರಿಗೆ ಹೆಚ್ಚುವರಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿ ಹಳ್ಳಿಗೂ ಭೇಟಿನೀಡಿ ರೈತರ ಸಮಸ್ಯೆ ಆಲಿಸಬೇಕು. ಎಲ್ಲ ದಾಖಲೆ ಪಡೆದು ಸರ್ಕಾರ ನೀಡುವ ಪರಿಹಾರ ಅರ್ಹರಿಗೆ ತಲುಪಿಸಬೇಕು. ರೈತರಿಂದ ಯಾವುದೇ ದೂರು ಬಾರದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ನಿರ್ಲಕ್ಷೃವಹಿಸಿದರೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ತಾಪಂ ಇಒ ಬಸವರಾಜ ಹಟ್ಟಿ, ಕೃಷಿ ಇಲಾಖೆ ಎಡಿ ಶ್ರೀನಿವಾಸ್ ನಾಯಕ ಇತರರಿದ್ದರು.