ಕೃಷ್ಣಾ ನದಿಗೆ ಜೀವಕಳೆ

Devadurga Krishna river water
ಮಳೆಯಿಂದ ದೇವದುರ್ಗದ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದು.
Published on

ದೇವದುರ್ಗ: ತಾಲೂಕು ಸೇರಿ ಕೃಷ್ಣಾ ಕೊಳ್ಳದ ಮೇಲ್ಭಾಗದಲ್ಲಿ ಎರಡ್ಮೂರು ದಿನಗಳಿಂದ ಸತತ ಮಳೆ ಬೀಳುತ್ತಿರುವುದರಿಂದ ಕೃಷ್ಣಾ ನದಿಗೆ ಜೀವಕಳೆ ಬಂದಿದೆ. ಬೇಸಿಗೆ ಮೂರು ತಿಂಗಳು ನೀರಿಲ್ಲದೆ ಭಣಗುಡುತ್ತಿದ್ದ ಹೊಳೆ ಮೈದುಂಬಿ ಧುಮ್ಮಿಕ್ಕುತ್ತಿದ್ದು ಜಲಚರಗಳಿಗೆ ಅನುಕೂಲವಾಗಿದೆ.

ಜಾಲಹಳ್ಳಿ, ತಿಂಥಣಿ ಸೇರಿ ನದಿಪಾತ್ರ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿದೆ. ನದಿಪಾತ್ರದ ರೈತರು, ಜನರಿಗೆ ಕುಡಿವ ನೀರು, ಕೃಷಿ, ಗೃಹೋಪಯೋಗಿ ಬಳಕೆಗೆ ಅನುಕೂಲವಾಗಿದೆ. ಪ್ರಾಣಿ, ಪಕ್ಷಿಗಳು ಸೇರಿ ಜಲಚರಗಳಿಗೂ ಸಹಕಾರಿಯಾಗಿದೆ.

ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಶನಿವಾರ ತಡರಾತ್ರಿ ಉತ್ತಮ ಮಳೆ ಸುರಿದಿದೆ. ಗಬ್ಬೂರು, ಜಾಲಹಳ್ಳಿ, ಮಸರಕಲ್, ಸುಂಕೇಶ್ವರಹಾಳ, ಕೊಪ್ಪರ, ಹೂವಿನಹೆಡಗಿ, ಗಲಗ, ಮುಂಡರಗಿ, ಗಾಣಧಾಳ ಸೇರಿ ವಿವಿಧೆಡೆ ಉತ್ತಮ ಮಳೆಯಾಗಿದೆ.

ಬಿರುಗಾಳಿ ಸಹಿತ ಮಳೆಗೆ ಪಲಕನಮರಡಿ, ಊಟಿ, ಗೆಜ್ಜೆಬಾವಿ ಸೇರಿ ವಿವಿಧೆಡೆ ವಿದ್ಯುತ್ ಕಂಬ, ಮರಗಳು ಧರೆಗುರುಳಿವೆ. ವಿದ್ಯುತ್ ಇಲ್ಲದೆ ಗ್ರಾಮೀಣ ಭಾಗದ ಜನರು ರಾತ್ರಿಯಿಡಿ ಜಾಗರಣೆ ಮಾಡಿದರು. ದೇವದುರ್ಗದಲ್ಲಿ 10.8 ಮಿಮೀ, ಅರಕೇರಾ 15, ಗಬ್ಬೂರು 7.1, ಗಲಗ 9, ಜಾಲಹಳ್ಳಿಯಲ್ಲಿ 45 ಮಿಮೀ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net