ಖಾತ್ರಿ ಕಾಮಗಾರಿ ವೀಕ್ಷಿಸಿದ ಕೇಂದ್ರ ತಂಡ

22-DVD-1
Published on

ದೇವದುರ್ಗ: ತಾಲೂಕಿನ ಚಿಂಚೋಡಿ, ಹೊಸೂರು ಸಿದ್ದಾಪುರ, ಪಲಕನಮರಡಿ, ಜೇರಬಂಡಿ ಗ್ರಾಪಂ ವ್ಯಾಪ್ತಿಯ ವಿವಿಧೆಡೆ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿ ಸ್ಥಳಕ್ಕೆ ಕೇಂದ್ರ ಸರ್ಕಾರದ ಮಿನಿಸ್ಟರಿ ಆಫ್ ಜಲಶಕ್ತಿ ತಂಡ ಗುರುವಾರ ಭೇಟಿ ನೀಡಿ ಪರಿಶೀಲಿಸಿತು.

ಜಲಶಕ್ತಿ ವಿಭಾಗದ ಅಧಿಕಾರಿ ಸತ್ಯಮೂರ್ತಿ ಮಾತನಾಡಿ, 2023-24 ಹಾಗೂ 2024-25ನೇ ಸಾಲಿನ ಜಲ ಸಿಂಚನ, ಜಲ ಭಾಗಿದಾರ್ ಯೋಜನೆಯಡಿ ಬದು, ಕೃಷಿ ಹೊಂಡ, ಕಂದಕ ನಿರ್ಮಾಣ, ಇಂಗುಗುಂಡಿ ಸೇರಿ ವಿವಿಧ ಕಾಮಗಾರಿ ವೀಕ್ಷಿಸಲಾಗಿದೆ. ಚಿಂಚೋಡಿ ಗ್ರಾಪಂ ವ್ಯಾಪ್ತಿಯ ಬಸಾಪುರ ಗುಡ್ಡದಲ್ಲಿ ಬದು ನಿರ್ಮಾಣ, ಕಂದಕ, ಹೊಸೂರು ಸಿದ್ದಾಪುರ ಗ್ರಾಮದ ರೈತರ ಹೊಲದಲ್ಲಿ ಬದು ನಿರ್ಮಾಣ ಕಾಮಗಾರಿ, ಪಲಕನಮರಡಿ ಗ್ರಾಪಂ ವ್ಯಾಪ್ತಿಯ ಮದರಕಲ್‌ನಲ್ಲಿ ಬದು ನಿರ್ಮಾಣ ಹಾಗೂ ಜೇರಬಂಡಿ ಗ್ರಾಪಂನಲ್ಲಿ ವಿವಿಧ ಕಾಮಗಾರಿಗಳ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಈ ಬಗ್ಗೆ ಸಚಿವಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದರು. ತಾಪಂ ಇಒ ಬಸವರಾಜ ಹಟ್ಟಿ, ಸಹಾಯಕ ನಿರ್ದೇಶಕ ಅಣ್ಣಾರಾವ್, ತಾಂತ್ರಿಕ ಸಂಯೋಜಕ ಸಾಗರ್, ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net