

ದೇವದುರ್ಗ : ಅರಕೇರಾ ತಾಲೂಕಿಗೆ ಹೊಸೂರು ಸಿದ್ದಾಪುರ ಗ್ರಾಪಂ ಸೇರ್ಪಡೆ ಮಾಡಿರುವು ದನ್ನು ಖಂಡಿಸಿ ವಿವಿಧ ಗ್ರಾಮದ ಜನರು ಜಾಲಹಳ್ಳಿ ನಾಡಕಚೇರಿ ಮುಂದೆ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ಜಾಲಹಳ್ಳಿಯಿಂದ ಹೊಸೂರು ಸಿದ್ದಾಪುರ 2 ಕಿಮೀ, ದೇವದುರ್ಗಕ್ಕೆ 18 ಕಿಮೀ ಅಂತರದಲ್ಲಿದೆ. ಆದರೆ, ಅರಕೇರಾಗೆ 31 ಕಿಮೀ ದೂರವಿದೆ. ಹೊಸ ತಾಲೂಕು ರಚನೆ ಮಾಡುವ ಮುನ್ನ ಹಳ್ಳಿ ಜನರ ಅಭಿಪ್ರಾಯ ಪಡೆಯಬೇಕು. ಸಾಧಕ ಬಾಧಕ ಕುರಿತು ಚರ್ಚಿಸಬೇಕು. ಬಹುಮುಖ್ಯವಾಗಿ ಹೊಸ ತಾಲೂಕು ಜನರ ಬೇಡಿಕೆಯಾಗಬೇಕೇ ಹೊರತು ರಾಜಕೀಯ ತೆವಲು ಆಗಬಾರದು. ಆದರೆ, ಜನರ ಭಾವನೆಗೆ ವಿರುದ್ಧವಾಗಿ ರಾಜಕೀಯ ನಾಯಕರು, ಅಧಿಕಾರಿಗಳು ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಹೊಸೂರು ಸಿದ್ದಾಪುರ ಗ್ರಾಪಂಯನ್ನು ದೇವದುರ್ಗ ತಾಲೂಕಿನಲ್ಲೇ ಉಳಿಸಬೇಕು. ಜನರ ಭಾವನೆ ಅರ್ಥಮಾಡಿಕೊಳ್ಳದೆ ನಿರ್ಲಕ್ಷ್ಯ ಮಾಡಿದರೆ ಮುಂಬರುವ ತಾಪಂ, ಜಿಪಂ ಚುನಾವಣೆ ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದರು.
ಹೊಸೂರು ಸಿದ್ದಾಪುರ ಗ್ರಾಪಂ ಅಧ್ಯಕ್ಷೆ ಮಹಾದೇವಮ್ಮ ಜಲ್ಲಿ, ಉಪಾಧ್ಯಕ್ಷ ಯಮನೂರಪ್ಪ ನಾಯಕ, ಮುಖಂಡ ರಾದ ಮಾನಪ್ಪ ಕಾವಲಿ, ತಿಮ್ಮಣ್ಣ ಮುರಾಳ, ಬಸವರಾಜ ಮಂಡಲಗುಡ್ಡ, ಗುಡದಪ್ಪ, ಗರುಡಯ್ಯ, ಸಾಗರ ನಾಯಕ, ರಂಗಣ್ಣ ಕೋಲ್ಕರ್, ಕೆ.ಎಸ್. ನಾಡಗೌಡ, ನರಸಣ್ಣ ನಾಯಕ, ಸಾಬಣ್ಣ ಕಮಲದಿನ್ನಿ, ಬಸನಗೌಡ ದೇಸಾಯಿ, ವಸಂತಕುಮಾರ, ಚಂದಪ್ಪ ಬುದ್ದಿನ್ನಿ, ಶಿವನಗೌಡ ಕಕ್ಕಲದೊಡ್ಡಿ ಇತರರಿದ್ದರು.
ಹೊಸೂರು ಸಿದ್ದಾಪುರ ಗ್ರಾಪಂ ಕಚೇರಿಯಲ್ಲಿ ಜಮಾವಣೆಗೊಂಡ ಬೊಮ್ಮನಹಳ್ಳಿ, ಬಸಾಪುರ ಗ್ರಾಮದ ನೂರಾರು ಜನರು ಅಲ್ಲಿಂದ ಎರಡು ಕಿಮೀ ದೂರದ ಜಾಲಹಳ್ಳಿ ನಾಡಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು.
ದಾರಿಯುದ್ದಕ್ಕೂ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನೂರಾರು ಮಹಿಳೆಯರು ಕರಪತ್ರ ಹಿಡಿದು ಗಮನ ಸೆಳೆದರು. ನಾಲ್ಕು ಗಂಟೆಗೂ ಹೆಚ್ಚುಕಾಲ ಪ್ರತಿಭಟನೆ ನಡೆಸಿದರು. ಹೋರಾಟದಲ್ಲಿ ಎರಡು ಸಾವಿರಕ್ಕೂ ಅಧಿಕ ಜನರು ಭಾಗವಹಿಸಿದ್ದರು. ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಮನವಿ ಸ್ವೀಕರಿಸಿ, ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.