ರಾತ್ರಿಯಿಡಿ ಚಿಕ್ಕರೂಗಿ ಗ್ರಾಪಂ ಮುಂದೆ ಮಹಿಳೆ ಧರಣಿ

DHP 20-2
Published on

ದೇವರಹಿಪ್ಪರಗಿ: ಉಮೇದುವಾರಿಕೆಯ ಚಿಹ್ನೆ ಕೇಳಲು ಹೋದಾಗ ನಾಮಪತ್ರ ಹಿಂಪಡೆಯುವ ಅರ್ಜಿಗೆ ಸಹಿ ಮಾಡಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಅಭ್ಯರ್ಥಿಯೊಬ್ಬರು ಚಿಕ್ಕರೂಗಿ ಗ್ರಾಪಂ ಎದುರು ಶನಿವಾರ ರಾತ್ರಿಯಿಡಿ ಧರಣಿ ಕುಳಿತು ಪ್ರತಿಭಟಿಸಿದ್ದಾರೆ.

ಎರಡನೇ ಹಂತದಲ್ಲಿ ನಡೆಯುವ ಗ್ರಾಪಂಗಳ ಚುನಾವಣೆಗೆ ಶನಿವಾರ ನಾಮಪತ್ರ ವಾಪಸ್ ಪಡೆಯುವ ಹಾಗೂ ಅಭ್ಯರ್ಥಿಗಳಿಗೆ ಚಿಹ್ನೆ ನೀಡುವ ದಿನವಾಗಿತ್ತು. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಚಿಹ್ನೆ ತರಲು ಚುನಾವಣೆ ಅಧಿಕಾರಿಗಳಿಗೆ ಭೇಟಿ ಮಾಡಲು ಹೋದಾಗ ಚುನಾವಣಾಧಿಕಾರಿ ಹಾಗೂ ಕಂಪ್ಯೂಟರ್ ಸಿಬ್ಬಂದಿ ನಾಮಪತ್ರ ಹಿಂಪಡೆಯುವ ಅರ್ಜಿಗೆ ಸಹಿ ಪಡೆದು 100 ರೂ. ಕೊಟ್ಟು ಕಳಿಸಿದ್ದಾರೆ ಎಂದು ಅಭ್ಯರ್ಥಿ ನಾಗಮ್ಮ ಸಂಗನಗೌಡ ಬಿರಾದಾರ ಆರೋಪಿಸಿದ್ದಾರೆ.

ಚುನಾವಣಾಧಿಕಾರಿಗಳನ್ನು ಭೇಟಿ ಮಾಡಲು ನನ್ನ ಜತೆ ಯಾರಿಗೂ ಒಳಗಡೆ ಬಿಟ್ಟಿಲ್ಲ, ನನಗೆ ಓದಲು ಬರುವುದಿಲ್ಲ. ಹೊರಗಡೆ ಬಂದು ನಮ್ಮ ಯಜಮಾನರಿಗೆ ಹೇಳಿದಾಗ ಅವರು ಗಾಬರಿಯಾಗಿ ಚುನಾವಣಾಧಿಕಾರಿಗಳನ್ನು ಕೇಳಿದಾಗ ಹಾರಿಕೆ ಉತ್ತರ ನೀಡಿದ್ದಾರೆ. ನೀವೇನಿದ್ದರೂ ಕೋರ್ಟ್‌ನಲ್ಲಿ ವಿಚಾರಿಸಿ ಎಂದು ಬೆದರಿಸಿದ್ದಾರೆ. ನ್ಯಾಯ ಸಿಗುವವರೆಗೂ ಧರಣಿ ಕುಳಿತು ಪ್ರತಿಭಟಿಸುತ್ತಿರುವುದಾಗಿ ತಿಳಿಸಿದರು.

ವಿಷಯ ತಿಳಿದು ರಾತ್ರಿ 10 ಗಂಟೆ ಸುಮಾರಿಗೆ ದೇವರಹಿಪ್ಪರಗಿ ತಹಸೀಲ್ದಾರ್ ಆಗಮಿಸಿ ಪ್ರತಿಭಟನೆ ಕುಳಿತವರನ್ನು ಮಾತನಾಡಿಸದೆ ಮನವಿಯನ್ನೂ ಸ್ವೀಕರಿಸದೆ ಚುನಾವಣಾಧಿಕಾರಿಳೊಂದಿಗೆ ಚರ್ಚಿಸಿ ಅವರನ್ನು ತಮ್ಮ ವಾಹನದಲ್ಲೇ ಕರೆದುಕೊಂಡು ಹೋಗಿದ್ದಾರೆ. ತಹಸೀಲ್ದಾರ್ ನಡೆಯಿಂದ ಕೋಪಗೊಂಡ ಅನ್ಯಾಯಕ್ಕೊಳಗಾದ ಅಭ್ಯರ್ಥಿ ಹಾಗೂ ಬೆಂಬಲಿಗರು ಅವರಿಗೆ ಧಿಕ್ಕಾರ ಕೂಗಿ ರಾತ್ರಿಯಿಡಿ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು. ಬೆಳಗಿನ ಜಾವ ಚುನಾವಣಾಧಿಕಾರಿ ವಿರುದ್ಧ ದೂರು ನೀಡಲು ತೆರಳಿದ್ದಾರೆ. ಆದರೆ, ಪಿಎಸ್‌ಐ ಸುರೇಶ ಗಡ್ಡಿ, ನೀವು ಈಗಾಗಲೇ ಸಹಿ ಮಾಡಿದ ಅಧಿಕೃತ ದಾಖಲಾತಿ ಅವರ ಬಳಿ ಇರುವುದರಿಂದ ಪ್ರಕರಣ ದಾಖಲಿಸಿದರೂ ಪ್ರಯೋಜನವಿಲ್ಲ ಎಂದು ಮನವೊಲಿಸಿ ಕಳುಹಿಸಿದ್ದಾರೆ. ಜಿಲ್ಲಾಧಿಕಾರಿಗಳು ನಮಗೆ ನ್ಯಾಯ ಒದಗಿಸಿ ಕೊಡಬೇಕೆಂದು ನಾಗಮ್ಮ ಸಂಗನಗೌಡ ಬಿರಾದಾರ ಆಗ್ರಹಿಸಿದ್ದಾರೆ.

ನಮ್ಮ ಚುನಾವಣಾಧಿಕಾರಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಹಿಳೆ ಇವರ ಹತ್ತಿರ ಬಂದು ನಾಮಪತ್ರ ಹಿಂಪಡೆಯುವ ಅರ್ಜಿಗೆ ಸಹಿ ಹಾಕಿ 100 ರೂ. ಇಡಗಂಟು ಪಡೆದುಕೊಂಡು ಹೊರಹೋಗಿದ್ದಾರೆ. ಎಷ್ಟೋ ಸಮಯದ ನಂತರ ಒಳಗಡೆ ಬಂದು ತಕರಾರು ಮಾಡಿದ್ದಾರೆ. ಇದರಲ್ಲಿ ನಮ್ಮ ಚುನಾವಣಾಧಿಕಾರಿ ಯಾವುದೇ ತಪ್ಪು ಕಂಡು ಬಂದಿಲ್ಲ.

ಮೇಘರಾಜ ನಾಯಿಕ್, ತಹಸೀಲ್ದಾರ್ ದೇವರಹಿಪ್ಪರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net