ಮಾ.9ರಂದು ದೇವರಾಯನದುರ್ಗ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ

03Tmk_DevarayanaDurga_jatre
Published on

ತುಮಕೂರು: ದೇವರಾಯನದುರ್ಗ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ ಮಾ.9ರಂದು ಜರುಗಲಿದ್ದು, ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ರಸ್ತೆ ಹಾಗೂ ವಿದ್ಯುತ್ ಕಾಮಗಾರಿಗಳನ್ನು ಎರಡ್ಮೂರು ದಿನದಲ್ಲಿ ಪೂರ್ಣಗೊಳಿಸುವಂತೆ ಉಪವಿಭಾಗಾಧಿಕಾರಿ ಅಜಯ್ ತಾಕೀತು ಮಾಡಿದರು.

ನಗರದ ಎಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ದೇವರಾಯದುರ್ಗ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷಯನ್ನು ವಹಿಸಿ ಮಾತನಾಡಿದ ಅವರು, ಪಿಡಬ್ಲೂೃಡಿ ಹಾಗೂ ಬೆಸ್ಕಾಂ ಇಂಜಿನಿಯರ್‌ಗಳಿಗೆ ಸೂಚನೆಯನ್ನು ನೀಡಿದ್ದಲ್ಲದೆ, ಊರ್ಡಿಗೆರೆ ಭಾಗದಿಂದ ಕೈಗೊಂಡಿರುವ ರಸ್ತೆ ಕಾಮಗಾರಿ ಹಾಗೂ ರಥಬೀದಿಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎರಡು ಬದಿಯ ಚರಂಡಿಗಳ ಮೇಲೆ ಸ್ಲಾಬ್ ಹಾಕಲು ಸೂಚಿಸಿದರು.

ರಥವು ಹೈಡ್ರಾಲಿಕ್ ವ್ಯವಸ್ಥೆಯಿಂದ ನಿರ್ವಹಿಸುವುದಾಗಿರುವುದರಿಂದ ಸಂಬಂಧಪಟ್ಟ ಹೈಡ್ರಾಲಿಕ್ ತಂತ್ರಜ್ಞರನ್ನು ಕರೆಸಿ ಪರೀಕ್ಷೆ ನಡೆಸಿ ಪ್ರಾಯೋಗಿಕ ಚಾಲನೆ ನೀಡುವ ವ್ಯವಸ್ಥೆಯಾಗಬೇಕು. ಅದನ್ನು ಪಿಡಬ್ಲೂೃಡಿ ಇಲಾಖೆ ಇಂಜಿನಿಯರ್‌ಗಳು ಪರಿಶೀಲಿಸಬೇಕು. ಮಾ.8, 9 ಹಾಗೂ 10ರಂದು ನಿರಂತರವಾಗಿ 3ಫೇಸ್ ವಿದ್ಯುತ್ ಸರಬರಾಜು ಮಾಡಲು, ರಥಬೀದಿಯಲ್ಲಿ ವಿದ್ಯುತ್ ದೀಪಗಳ ಅಳವಡಿಕೆಗೆ ವ್ಯವಸ್ಥೆಗೆ ಸಂಬಂಧಿಸಿದಂತೆ ಬೆಸ್ಕಾಂ ಇಂಜಿನಿಯರ್‌ಗಳು ಕ್ರಮಕೈಗೊಳ್ಳಬೇಕು. 2 ಇಲಾಖೆಗಳ ಇಂಜಿನಿಯರ್‌ಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಂಟಿ ಪರಿಶೀಲನೆ ನಡೆಸಿ ಕಾಮಗಾರಿಗಳ ಪ್ರಗತಿ ಮತ್ತು ಸುರಕ್ಷತೆಯ ಬಗ್ಗೆ ಗಮನ ಹರಿಸಬೇಕು ಎಂದರು.

150 ಪೊಲೀಸರ ನಿಯೋಜನೆ: ಮಹಿಳಾಪೇದೆ, ಹೋಂ ಗಾರ್ಡ್ಸ್ ಸೇರಿ ಸುಮಾರು 150 ಪೊಲೀಸರನ್ನು ಭದ್ರತಾ ವ್ಯವಸ್ಥೆಗೆ ನಿಯೋಜಿಸಬೇಕು. ದೇವರ ಆಭರಣ ತೆಗೆದುಕೊಂಡು ಹೋಗುವಾಗ ಹಾಗೂ ಖಜಾನೆಗೆ ಜಮಾ ಮಾಡುವಾಗ ಸೂಕ್ತ ರಕ್ಷಣೆ ನೀಡಬೇಕು. ಜತೆಗೆ ರಥಬೀದಿಯಲ್ಲಿ ಭಕ್ತರು ಸಂಚರಿಸಲು ತೊಂದರೆಯಾಗದಂತೆ ಅಂಗಡಿಗಳ ತೆರವುಗೊಳಿಸುವ ಕಾರ್ಯ ಪೊಲೀಸ್ ಇಲಾಖೆ ನಿರ್ವಹಿಸುವಂತೆ ಅಜಯ್ ತಿಳಿಸಿದರು. ಸಾರ್ವಜನಿಕರ ಅನುಕೂಲಕ್ಕಾಗಿ 20ಕ್ಕೂ ಹೆಚ್ಚು ತಾತ್ಕಾಲಿಕ ಮೊಬೈಲ್ ಶೌಚಾಗೃಹಗಳನ್ನು ಅದಕ್ಕೆ ನೀರು ಸರಬರಾಜು ವ್ಯವಸ್ಥೆ ಮಾಡಬೇಕು. ಇನ್ನೂ ಪ್ಲಾಸ್ಟಿಕ್ ಬಳಕೆ ಕಡ್ಡಾಯವಾಗಿ ನಿಷೇಧಿಸಬೇಕು, ಜಾತ್ರಾ ಸಮಯದಲ್ಲಿ ಮದ್ಯಪಾನ, ಧೂಮಪಾನ ಕಡ್ಡಾಯವಾಗಿ ನಿಷೇಧಿಸುವಂತೆ ಪೊಲೀಸ್ ಇಲಾಖೆ ಕ್ರಮ ಜರುಗಿಸುವಂತೆ ಹೇಳಿದರು.

ಸಭೆಯಲ್ಲಿ ತಹಸೀಲ್ದಾರ್ ಮೋಹನ್‌ಕುಮಾರ್, ದೇವಸ್ಥಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಸವಿತಾ ಮತ್ತಿತರರು ಉಪಸ್ಥಿತರಿದ್ದರು.

60 ಬಸ್ ವ್ಯವಸ್ಥೆ : ಸಾರಿಗೆ ಇಲಾಖೆ ವತಿಯಿಂದ ಜಾತ್ರಾ ಮಹೋತ್ಸವ ಅಂಗವಾ 60 ಸಾಮಾನ್ಯ ಬಸ್, 5 ಮಿನಿಬಸ್ ವ್ಯವಸ್ಥೆ ಮಾಡಲಾಗಿದೆ. ಕುಂಬಿ ಬೆಟ್ಟದ ಮೇಲೆ ಅಂಗವಿಕಲರು ಹಾಗೂ ಗಣ್ಯರ ವಾಹನಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ವಾಹನಗಳನ್ನು ನಿಷೇಧಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net