ದೇವರಾಯನದುರ್ಗ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ

09Tmk_DevrayanaDurga_Rathotsava
Published on

ತುಮಕೂರು: ಇತಿಹಾಸ ಪ್ರಸಿದ್ಧ ದೇವರಾಯನದುರ್ಗ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ನೆರವೇರಿತು.

ಜಿಲ್ಲಾಡಳಿತದ ಉಸ್ತುವಾರಿಯಲ್ಲಿ ನಡೆದ ಜಾತ್ರೆಯಲ್ಲಿ ಮಧ್ಯಾಹ್ನ 1ಕ್ಕೆ ಶಾಸಕ ಡಿ.ಸಿ.ಗೌರಿಶಂಕರ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಪಂ ಸಿಇಒ ಶುಭಾಕಲ್ಯಾಣ್ ಹೋಮದಲ್ಲಿ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ಮಧ್ಯಾಹ್ನ 1.05ಕ್ಕೆ ಆಗಸದಲ್ಲಿ ಗರುಡ ದರ್ಶನ ನೀಡಿದ ನಂತರ ಭಕ್ತರ ಪರಾಕಾಷ್ಠೆ ಮುಗಿಲು ಮುಟ್ಟಿತು. ಶ್ರದ್ಧಾಭಕ್ತಿಯಿಂದ ರಥ ಎಳೆದು ಬಾಳೆಹಣ್ಣು ದವನ ತೂರಿ ಭಕ್ತಿಯಲ್ಲಿ ಮಿಂದೆದ್ದರು.

ಸುಸಜ್ಜಿತ ರಥದಲ್ಲಿ ಲಕ್ಷ್ಮಿನರಸಿಂಹಸ್ವಾಮಿ ಕೂರಿಸಿ ದೇವಸ್ಥಾನದ ಮುಂಭಾಗದ ತೇರುಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಜನರ ನೂಕುನುಗ್ಗಲು ತಪ್ಪಿಸಲು ಹಾಗೂ ದೇವರ ದರ್ಶನಕ್ಕೆ ಯಾವುದೇ ರೀತಿಯಲ್ಲೂ ಅನನುಕೂಲವಾಗದಂತೆ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿತ್ತು. ಬ್ರಹ್ಮರಥೋತ್ಸವದಲ್ಲಿ ಸಹಸ್ರಾರು ಭಕ್ತರು ಬರುವುದನ್ನು ನಿರೀಕ್ಷಿಸಿದ್ದ ಜಿಲ್ಲಾಡಳಿತ ಜಾತ್ರೆಗೆ ಬಂದಿದ್ದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಮೂಲ ವ್ಯವಸ್ಥೆ ಮಾಡಿತ್ತು.

70 ಸಾರಿಗೆ ಬಸ್ ಸೇವೆ: ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಬೆಂಗಳೂರು, ತುಮಕೂರು, ಕೊರಟಗೆರೆ ಹಾಗೂ ಊರ್ಡಿಗೆರೆ ಭಾಗದಿಂದ ವಿಶೇಷ ಸಾರಿಗೆ ಬಸ್ ಸೇವೆ ಒದಗಿಸಲಾಗಿತ್ತು. ಇನ್ನೂ ಕುಂಬಿಬೆಟ್ಟಕ್ಕೆ ಮಿನಿಬಸ್ ಸೌಕರ್ಯವನ್ನೂ ಕಲ್ಪಿಸಲಾಗಿತ್ತು.

ಪೊಲೀಸರ ನಿಯೋಜನೆ: ಜಾತ್ರೆ ಅಂಗವಾಗಿ 150ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ಖಾಸಗಿ ಸೆಕ್ಯೂರಿಟಿ ಗಾರ್ಡ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸಹ ಇದ್ದರು. ಯಾವುದೇ

ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಮಾಜಿ ಸಚಿವ ಸೊಗಡುಶಿವಣ್ಣ, ಮಾಜಿ ಶಾಸಕ ಬಿ.ಸುರೇಶಗೌಡ, ಊರ್ಡಿಗೆರೆ ಜಿಪಂ ಸದಸ್ಯ ವೈ.ಎಚ್.ಹುಚ್ಚಯ್ಯ, ತಹಸೀಲ್ದಾರ್ ಟಿ.ವಿ.ಮೋಹನ್‌ಕುಮಾರ್, ದೇವಸ್ಥಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಸವಿತ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಮೊಬೈಲ್ ಶೌಚಗೃಹ ವ್ಯವಸ್ಥೆ: ಸಾರ್ವಜನಿಕರ ಅನುಕೂಲಕ್ಕಾಗಿ 20ಕ್ಕೂ ಹೆಚ್ಚು ತಾತ್ಕಾಲಿಕ ಮೊಬೈಲ್ ಶೌಚಗೃಹಗಳನ್ನು ತೆರೆದು ಅದಕ್ಕೆ ನೀರು ಸರಬರಾಜು ವ್ಯವಸ್ಥೆ ಮಾಡಲಾಗಿತ್ತು. ವಾಹನಗಳ ಪಾರ್ಕಿಂಗ್ ಜತೆಗೆ ಕುಡಿಯುವ ನೀರು ಮುಂತಾದ ಸೌಕರ್ಯಗಳಿದ್ದವು. ಧೂಳು ಏಳದಂತೆ ನೀರುಹಾಯಿಸಲಾಗಿತ್ತು.

ತಟ್ಟದ ಕರೊನಾ ಎಫೆಕ್ಟ್ ! : ದೇವರಾಯನದುರ್ಗ ಜಾತ್ರೆಗೆ ಯಾವುದೇ ರೀತಿಯ ಕರೊನಾ ಎಫೆಕ್ಟ್ ತಟ್ಟಲಿಲ್ಲ. ಭಕ್ತರಲ್ಲಿ ಕರೊನಾ ಭೀತಿ, ಆತಂಕ ಕಾಣಲಿಲ್ಲ. ಸುಡುಬಿಸಿಲಿನಲ್ಲೂ ಸಹಸ್ರಾರು ಭಕ್ತರು ಲಕ್ಷ್ಮೀನರಸಿಂಹಸ್ವಾಮಿ ದರ್ಶನ ಪಡೆದರು.

ದೇವರಾಯನದುರ್ಗ ಜಾತ್ರೆ ಸಂದರ್ಭದಲ್ಲಿ ಇಡೀ ದಿನ ಸಾರಿಗೆ ಬಸ್ ಸೇವೆ ಒದಗಿಸಿದ್ದು ಒಟ್ಟು 300 ಟ್ರಿಪ್ ಮಾಡಲಾಗಿದೆ. ಬೆಂಗಳೂರಿನಿಂದ -30, ಕೊರಟಗೆರೆಯಿಂದ-30, ಕುಂಬಿಬೆಟ್ಟಕ್ಕೆ-50 ಟ್ರಿಪ್ ಹಾಗೂ ತುಮಕೂರಿನಿಂದ 190 ಟ್ರಿಪ್ ಸಾರಿಗೆ ಬಸ್ ಸಂಚರಿಸಿವೆ. ಗಜೇಂದ್ರಕುಮಾರ್ ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ತುಮಕೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net