ಬಡವರಿಗೆ ನ್ಯಾಯ ಒದಗಿಸಿದ ದೇವರಾಜ ಅರಸು

DEVARAJ ARASU DINACHARANE
Published on

ಬ್ಯಾಡಗಿ: ಊಳುವವನೇ ಭೂಮಿಯ ಒಡೆಯ ಎಂಬ ಕಾನೂನನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಗೊಳಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಭಾನುವಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 108ನೇ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

1970ರ ದಶಕದಲ್ಲಿ ಆಗಿನ ಪ್ರಧಾನಿ ಮುರಾರ್ಜಿ ದೇಸಾಯಿ ಅವರು ದೇಶದಲ್ಲಿ ಊಳುವವನೇ ಭೂಮಿ ಒಡೆಯ ಕಾಯ್ದೆ ಜಾರಿಗೊಳಿಸಿದ್ದರು. ಬಳಿಕ ಎಲ್ಲ ರಾಜ್ಯಗಳು ಈ ಕಾಯ್ದೆ ಜಾರಿಗೆ ತರುವಲ್ಲಿ ಹಿಂದೇಟು ಹಾಕಿದ್ದವು. ಆದರೆ, ಡಿ. ದೇವರಾಜ ಅರಸು ಅವರು, ಬಡವರಿಗೆ ನ್ಯಾಯ ಒದಗಿಸಲು ಮುಲಾಜಿಲ್ಲದೆ ಕಾಯ್ದೆ ಜಾರಿಗೊಳಿಸಿದರು. ಲಕ್ಷಾಂತರ ಜೀತಕಾರ್ವಿುಕರು ಭೂ ಒಡೆಯರನ್ನಾಗಿಸಿದ ಕೀರ್ತಿ ಅವರಿಗೆ ಸಲ್ಲಬೇಕಿದೆ ಎಂದರು.

ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಿ.ಬಿ. ಪ್ರಸಾದಿಮಠ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಂದ ಸಾಕಷ್ಟು ಕುಟುಂಬಗಳಿಗೆ ಜೀವ ಬಂದಂತಾಗಿದೆ. ಶೈಕ್ಷಣಿಕವಾಗಿ ವಸತಿ ನಿಲಯ, ಶಿಷ್ಯವೇತನ ಸೇರಿದಂತೆ ಹಲವು ಯೋಜನೆ, ರೈತರಿಗೆ ಕೊಳವೆ ಬಾವಿ, ಯುವಕರಿಗೆ ಉದ್ಯೋಗ ಸಹಾಯಧನ ನೀಡಲಾಗುತ್ತಿದೆ. ಬಹುಶಃ ಅರಸುರವರು ಹಿಂದುಳಿದವರಿಗೆ ಆದ್ಯತೆ ನೀಡದಿದ್ದಲ್ಲಿ ಇಲಾಖೆ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದರು.

ಎನ್​ಸಿಸಿ ಕ್ಯಾಪ್ಟನ್ ಡಿ.ಬಿ. ಕುಸಗೂರು, ದೇವರಾಜ ಅರಸು ಅವರ ಜೀವನ, ನಡೆದು ಬಂದ ದಾರಿ, ಅವರ ಕನಸು, ಆಗಿನ ರಾಜಕೀಯ ವ್ಯವಸ್ಥೆ ಕುರಿತು ಉಪನ್ಯಾಸ ನೀಡಿದರು.

ಪುರಸಭೆ ಸದಸ್ಯ ಶಂಕರ ಕುಸಗೂರು, ತಾಪಂ. ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳಿಯಪ್ಪಗೋಳ, ರೋಟರಿ ಅಧ್ಯಕ್ಷ ಮಾಲತೇಶ ಉಪ್ಪಾರ, ಗಿರೀಶಸ್ವಾಮಿ ಇಂಡಿಮಠ, ಹನುಮಂತ ಭೋವಿ, ಮಲ್ಲಿಕಾರ್ಜುನ ಕರಿಲಿಂಗಣ್ಣನವರ, ಮಂಜುನಾಥ ಭೋವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net