

ಮೈಸೂರು: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಕೇವಲ ಒಂದು ವರ್ಗದವರಿಗೆ ಸೀಮಿತವಾಗದೇ ಎಲ್ಲರಿಗೂ ಪ್ರಯೋಜನ ಆಗುವ ಕಾರ್ಯಕ್ರಮಗಳನ್ನು ರೂಪಿಸಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.
ಜೆಎಲ್ಬಿ ರಸ್ತೆಯ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಶುಕ್ರವಾರ ಅನ್ವೇಷಣಾ ಸೇವಾ ಟ್ರಸ್ಟ್, ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ‘ಧ್ವನಿ ಕೊಟ್ಟ ದಣಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಅರಸು ಆಡಳಿತದಲ್ಲಿ ಜೀತ ಪದ್ಧತಿ ನಿರ್ಮೂಲನೆ, ಮಲಹೊರುವ ಪದ್ಧತಿ ನಿಷೇಧ, ಉಳುವವನೇ ಭೂಮಿಯ ಒಡೆಯ ಮೊದಲಾದ ನಿರ್ಣಯಗಳು ಪ್ರಮುಖವಾಗಿವೆ ಎಂದರು.
ಅರಸು ಅವರು ಸಮಾಜದ ದೀನದಲಿತರು ಮತ್ತು ಹಿಂದುಳಿದ ವರ್ಗಗಳ ಪರವಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು. ಸಮಾಜದ ತುಳಿತಕ್ಕೊಳಗಾದ ವರ್ಗಗಳಿಗೆ ಧ್ವನಿ ನೀಡಿದ ಅರಸ್ ಅನ್ನು ‘ಧ್ವನಿ ಕೊಟ್ಟ ದಣಿ’ ಎಂದು ಈಗಲು ಕರೆಯಲು ಹೆಮ್ಮೆ ಎನಿಸುತ್ತದೆ. ದಶಕಗಳಿಂದ ತಮ್ಮ ಹಕ್ಕುಗಳಿಂದ ವಂಚಿತರಾದ ಸೂಕ್ಷ್ಮ ಸಮುದಾಯಗಳಿಗೂ ಅರ್ಹ ಮೀಸಲಾತಿಯನ್ನು ಒದಗಿಸಿದ್ದಾರೆ ಎಂದು ಹೇಳಿದರು.
ನಾನು ಅರಸು ಅವರ ಹುಟ್ಟೂರಿನಿಂದ ಬಂದು ಹಾಗೂ ಎಂಬಿಬಿಎಸ್ ಮುಗಿದ ನಂತರ ನೇರವಾಗಿ ಸರ್ಕಾರಿ ಹುದ್ದೆ ಪಡೆದ ಫಲಾನುಭವಿ. ಬಡವರಿಗೆ, ದೀನ ದಲಿತರಿಗೆ, ಅಸಂಘಟಿತರಿಗೆ ಧ್ವನಿ ಇಲ್ಲದವರಿಗೆ ಧ್ವನಿ ನೀಡುವುದರ ಜತೆಗೆ ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಿದ ಏಕೈಕ ವ್ಯಕ್ತಿ ಅವರಾಗಿದ್ದರು ಎಂದರು.
ಈ ಸಂದರ್ಭ ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ಟಿ.ವಿ. ರಾಜೇಶ್ವರ್, ಎಸ್.ಟಿ. ರವಿಕುಮಾರ್, ಕೆ. ನರಸಿಂಹಮೂರ್ತಿ, ಆರ್. ಕೃಷ್ಣ, ಛಾಯಾಗ್ರಾಹಕ ಎಂ.ಎ. ಶ್ರೀರಾಂ ಅವರಿಗೆ ಧ್ವನಿಕೊಟ್ಟ ದಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು
ಮೈಸೂರು ಅರಗು ಬಣ್ಣ ಮತ್ತು ಕಾರ್ಖಾನೆ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್, ಶ್ರೀ ಕ್ಷೇತ್ರ ಹೊರನಾಡು ಧರ್ಮಕರ್ತರಾದ ಜಿ.ಭೀಮೇಶ್ವರ ಜೋಶಿ, ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ಅರಸ್, ಅನ್ವೇಷಣಾ ಸೇವಾ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಅಮರನಾಥ್‌ರಾಜೇ ಅರಸ್, ಅರಸು ಮಂಡಳಿ ಅಧ್ಯಕ್ಷ ಎಚ್‌ಎಂಟಿ ಲಿಂಗರಾಜೇ ಅರಸ್, ಅನ್ವೇಷಣಾ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಎಂಜಿಆರ್ ಅರಸ್ ಇದ್ದರು.