ಬಡವರ ಆಶಾಕಿರಣ ದೇವರಾಜ ಅರಸು

20 ckm 4
ಚಿಕ್ಕಮಗಳೂರು ಹೊರವಲಯದ ತೇಗೂರಿನ ಡಿ. ದೇವರಾಜ ಅರಸು ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿ. ಡಿ.ದೇವರಾಜ ಅರಸು ಅವರ ೧೦೯ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಉದ್ಘಾಟಿಸಿದರು. ನಾಗಶ್ರೀ, ಮಧುಕುಮಾರ್ ರಾಜ್ ಅರಸ್, ಎನ್.ಮಂಜುನಾಥ್, ಕೆ.ಟಿ.ರಾಧಾಕೃಷ್ಣ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಸಾಮಾಜಿಕ ಸಮಾನತೆ ಹಿತದೃಷ್ಟಿಯಿಂದ ಕಡು ಬಡವರಿಗಾಗಿ ಅನೇಕ ಕಾರ್ಯಕ್ರಮ ರೂಪಿಸಿ ಬಡವರ ಬದುಕಿನಲ್ಲಿ ಹೊಸ ಬದುಕಿನ ಆಶಾಕಿರಣ ಮೂಡಿಸಿದವರು ದಿ. ಡಿ.ದೇವರಾಜ ಅರಸು ಎಂದು ಜಿಪಂ ಸಿಇಒ ಎಚ್.ಎಸ್.ಕೀರ್ತನಾ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಮಂಗಳವಾರ ತೇಗೂರಿನ ಡಿ. ದೇವರಾಜ ಅರಸು ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿ. ಡಿ.ದೇವರಾಜ ಅರಸು ಅವರ ೧೦೯ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ನ್ಯಾಯ ಒದಗಿಸುವ ದೃಷ್ಟಿಯಿಂದ ಡಿ. ದೇವರಾಜ ಅರಸು ಅವರು ಹಲವಾರು ಸುಧಾರಣೆಗಳನ್ನು ಮಾಡಿದರು. ಭೂ ಸುಧಾರಣಾ ಕಾಯಿದೆ ಸೇರಿದಂತೆ ಸಾಕಷ್ಟು ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನಗಳಿಗೆ ಆದ್ಯತೆ ನೀಡುವ ಜೊತೆಗೆ ಬಡ ವರ್ಗಗಳ ಮಕ್ಕಳ ಶಿಕ್ಷಣಕ್ಕೆ ಹಾಸ್ಟೆಲ್, ಮೀಸಲಾತಿ ಸೌಲಭ್ಯ ಒದಗಿಸಿದ್ದಾರೆ. ಹಿಂದುಳಿದ ವರ್ಗದವರು ಹಾಗೂ ಶೋಷಿತ ಸಮುದಾಯದ ಮಕ್ಕಳ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಏಳಿಗೆಗಾಗಿ ಶ್ರಮಿಸಿದ್ದಾರೆ. ಅಸಾಧ್ಯವಾದ ಸಾಧನೆಗಳನ್ನು ಮೌನವಾಗಿ ಮಾಡಿ ತೋರಿಸಿದ ಮೌನ ಕ್ರಾಂತಿಯ ಹರಿಕಾರ ಎಂದು ಶ್ಲಾಘಿಸಿದರು.
ಬೇಲೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಉಪನ್ಯಾಸ ನೀಡಿ, ದಿ. ಡಿ. ದೇವರಾಜ ಅರಸು ಅವರು ಡಾ. ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧಿ ಸೇರಿದಂತೆ ಮತ್ತಿತರ ಮಹಾನೀಯರ ಸಿದ್ದಾಂತ ಮೈಗೂಡಿಸಿಕೊಂಡಿದ್ದರು. ವಿದ್ಯೆ ಕಲಿತು ಸಾಕಷ್ಟು ಜ್ಞಾನ ಪಡೆದ ಅವರು ಯಾವುದೇ ನೌಕರಿಗೆ ಹೋಗದೇ ತಮ್ಮ ಸ್ವಂತ ಗ್ರಾಮಕ್ಕೆ ಬಂದು ಕೃಷಿ ಕಾರ್ಯ ಕೈಗೊಂಡು ತಮ್ಮ ಗ್ರಾಮಕ್ಕೆ ಮಾದರಿಯಾಗುವ ಹಾಗೆ ಕೆಲಸ ಮಾಡಿದರು ಎಂದರು.
ಬಡವರ ಸಮಸ್ಯೆಯನ್ನು ಮನೆಯಲ್ಲಿ ಕುಳಿತು ಕೇಳಿ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಿದರು. ಮುಂದೆ ಒಂದು ದಿನ ಅವರು ಜನ ನಾಯಕರಾಗಿ ಹೊರ ಹೊಮ್ಮಿದರು. ಡಿ. ದೇವರಾಜ ಅರಸು ಅವರು ಹಿಂದುಳಿದ ವರ್ಗದ ಧ್ವನಿಯಾಗಿದ್ದರು. ಉಳುವವನೇ ಭೂ ಒಡೆಯ ಎಂದು ಘೋಷಣೆ ಮಾಡಿ ಭೂಮಿಯನ್ನು ಬಡವರಿಗೆ ಹಂಚಿ ಸಾಮಾಜಿಕ ನ್ಯಾಯ ಒದಗಿಸಿದವರಲ್ಲದೆ, ಸೂರು ಇಲ್ಲದವರಿಗೆ ಸೂರು ಒದಗಿಸಿದರು, ವೃದ್ದಾಪ್ಯ ವೇತನ, ಅಂಗವಿಕಲ ವೇತನ ಮತ್ತು ಹಿಂದುಳಿದ ವರ್ಗಗಳ ನಿರ್ದೇಶನಾಲಯ ಸಹ ಜಾರಿಗೆ ತಂದರು ಎಂದು ತಿಳಿಸಿದರು.
ಇಂದು ಬೆಂಗಳೂರು ನಗರವು ಸಿಲಿಕಾನ್ ಕಣಿವೆಯೆಂದು, ಮಾಹಿತಿ ತಂತ್ರಜ್ಞಾನದ ರಾಜಧಾನಿಯೆಂದು ಪ್ರಸಿದ್ಧಿಯಾಗಲು ಅರಸುರವರ ದೂರದೃಷ್ಟಿಯೇ ಕಾರಣ. ಅಲ್ಲದೇ ಎಲೆಕ್ಟಾçನಿಕ್ ಕ್ಷೇತ್ರದಲ್ಲಿ ಬೆಂಗಳೂರು ದಾಪುಗಾಲು ಹಾಕಲು ಅಡಿಗಲ್ಲಿಟ್ಟವರೇ ಅರಸು ಅವರು ಎಂದು ಹೇಳಿದರು.
ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ಅರಸು ಸಂಘದ ಅಧ್ಯಕ್ಷ ಮಧುಕುಮಾರ್ ರಾಜ್ ಅರಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್. ಮಂಜುನಾಥ್, ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ, ಅರಸು ಸಂಘದ ಕಾರ್ಯದರ್ಶಿ ದಶರಥ ರಾಜ ಅರಸ್, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಆರ್. ಬಡಿಗೇರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net