

ಹಾನಗಲ್ಲ: ಅವಕಾಶ ವಂಚಿತ ಸಮುದಾಯಗಳ ಹಿತಕ್ಕೆ ಪಾಲು ಕೊಡಿಸಿದ ಡಿ. ದೇವರಾಜ ಅರಸು, ಸಾಮಾಜಿಕ ನ್ಯಾಯದ ಹರಿಕಾರರಾಗಿ, ರಾಜ್ಯದ ಅಪ್ರತಿಮ ಮುಖ್ಯಮಂತ್ರಿಯಾಗಿ ಜನಮಾನಸದಲ್ಲಿ ನಿತ್ಯಸ್ಮರಣೀಯರಾಗಿದ್ದಾರೆ ಎಂದು ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾಒಕ್ಕೂಟದ ಅಧ್ಯಕ್ಷ ಸತೀಶ ಕಾಡಶೆಟ್ಟಿಹಳ್ಳಿ ಬಣ್ಣಿಸಿದರು.
ಪಟ್ಟಣದಲ್ಲಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬುಧವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 110 ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮಗೆ ರಾಜಕೀಯ ಸ್ವಾತಂತ್ರ್ಯ ಮಾತ್ರವಲ್ಲ. ಕಟ್ಟಕಡೆಯ ಪ್ರಜೆಗೆ ಸಾಂವಿಧಾನಿಕವಾದ ಸೌಲಭ್ಯಗಳು ದೊರೆಯಬೇಕು. ಈಗ ಸಾಮಾಜಿಕ ಸಮಾನತೆ ಸ್ವಲ್ಪಮಟ್ಟಿಗೆ ಸಾಧ್ಯವಾಗಿದ್ದರೂ ಆರ್ಥಿಕ ಸಮಾನತೆ ಸಾಧ್ಯವಾಗಿಲ್ಲ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಕೆಲವೇ ಕೆಲವರ ಕೈಯಲ್ಲಿದ್ದ ಉದ್ಯೋಗ, ಅಧಿಕಾರ ಹಿಂದುಳಿದ ವರ್ಗಗಳನ್ನು ಕಡೆಗಣಿಸಿತ್ತು. ಡಿ.ದೇವರಾಜ ಅರಸು ಸಾಮಾಜಿಕ ನ್ಯಾಯದ ರಥ ಎಳೆದು ಉಳುವವನೇ ಭೂಮಿಯ ಒಡೆಯ ಕಾನೂನು ಕಾರ್ಯರೂಪಕ್ಕೆ ತಂದು ಜನಪರ ಯೋಜನೆ ಮತ್ತು ಯೋಚನೆಗಳಿಗೆ ಅವಕಾಶ ಮಾಡಿಕೊಟ್ಟರು ಎಂದರು.
ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನದಲ್ಲಿ ಬರೆದಿದ್ದನ್ನು ಕಾರ್ಯರೂಪಕ್ಕೆ ತಂದ ಧೀಮಂತ ವ್ಯಕ್ತಿತ್ವ ಡಿ.ದೇವರಾಜ ಅರಸು ಅವರದ್ದಾಗಿದೆ ಎಂದರು.
ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ ಮಾತನಾಡಿ, ಬಡವರು ದೀನದಲಿತರ ಪರ ಕಾನೂನಿಗೆ ಶಕ್ತಿ ಕೊಟ್ಟ ದೇವರಾಜ ಅರಸು ಈ ನಾಡು ಕಂಡ ಅಪ್ರತಿಮ ನಾಯಕ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕಾಧಿಕಾರಿ ಎಸ್. ಆನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಸದಸ್ಯೆ ಮಮತಾ ಆರೆಗೊಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುನಾಥ ಗವಾಣಿಕರ, ಸುರೇಶ ನಾಗಣ್ಣನವರ, ತಾಪಂ ಇಒ ಪರಶುರಾಮ ಪೂಜಾರ, ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ರಾಮು ಎರೆಸೀಮಿ, ಅಶೋಕ ಆರೇಗೊಪ್ಪ, ರಾಮಚಂದ್ರ ಕಲ್ಲೇರ, ಅನಿತಾ ಡಿಸೋಜಾ, ರಾಜು ಜೋಗಪ್ಪನವರ, ಚಂದ್ರಪ್ಪ ಜಾಲಗಾರ, ಆನಂದ ಹವಳಣ್ಣನವರ, ಎನ್.ಎಂ. ಪೂಜಾರ, ಅಶೋಕ ದಾಸರ, ಮರಿಗೌಡ ಪಾಟೀಲ ಇತರರಿದ್ದರು. ಜಗದೀಶ ಮಡಿವಾಳರ ಸಂಗಡಿಗರು ಭಾವಗೀತೆ, ನಾಡಗೀತೆಗಳನ್ನು ಹಾಡಿದರು.