ಹಿಂದುಳಿದವರಿಗೆ ದಿಕ್ಕು ತೋರಿದ್ದು ಅರಸು

Screenshot_2024-08-21-21-13-07-28.jpg
Published on

ಬೆಳಗಾವಿ: ಹಿಂದುಳಿದ ವರ್ಗಗಳಿಗೆ ದಿಕ್ಕು ತೋರಿದ ಮಹಾಚೇತನ, ಗೌರವದ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿದ ಡಿ.ದೇವರಾಜ ಅರಸು ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅಭಿಪ್ರಾಯಪಟ್ಟರು.

ನಗರದ ಕುಮಾರ ಗಂಧರ್ವ ರಂಗಂಮದಿರದಲ್ಲಿ ಮಂಗಳವಾರ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಡಿ.ದೇವರಾಜ ಅರಸು 109ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಅರಸು ಆಡಳಿತಾವಧಿಯಲ್ಲಿ ಶೋಷಿತರನ್ನು ಮುಖ್ಯವಾಹಿನಿಗೆ ತರುವಲ್ಲಿ ಎಲ್ಲ ವಿರೋಧಗಳನ್ನು ಮೀರಿ ಪ್ರಯತ್ನಿಸಿ ಛಾಫು ಮೂಡಿಸಿದ್ದರು. ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಅನೇಕ ಕ್ರಾಂತಿಕಾರಿಕ ಬದಲಾವಣೆಗಳನ್ನು ತಂದರು. ಜೀತ ಪದ್ಧತಿ ನಿರ್ಮೂಲನೆ, ಮಲ ಹೊರುವ ಪದ್ಧತಿಯಂತಹ ಅನಿಷ್ಠ ತೊಡದು ಹಾಕಲು ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡ ಮಹಾನುಭಾವ ಎಂದರು.

ಸಂಪನ್ಮೂಲ ವ್ಯಕ್ತಿ, ಯಕ್ಕುಂಡಿ ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಡಾ.ವೈ.ಎಂ.ಯಾಕೊಳ್ಳಿ ಮಾತನಾಡಿ, ಡಿ.ದೇವರಾಜ ಅರಸು ಆಡಳಿತಾವಧಿಯಲ್ಲಿ ಬಡವರು, ಶೋಷಿತರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ್ದರು. ಹಿಂದುಳಿದ ವರ್ಗದವರಿಗಾಗಿ ಅನೇಕ ಯೋಜನೆ ಜಾರಿಗೊಳಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಜೀವನ ಮುಡಿಪಾಗಿಟ್ಟರು ಎಂದು ಸ್ಮರಿಸಿದರು.

ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಜಿಪಂ ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಮಾತನಾಡಿದರು. ಇಲಾಖೆಯ ಜಿಲ್ಲಾ ಅಧಿಕಾರಿ ಶಿವಪ್ರಿಯಾ ಕಡೇಚೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದಗಡದ ಸಂಗೊಳ್ಳಿ ರಾಯಣ್ಣ ಸ್ಮಾರಕ ಶಾಲೆಯ ವಿಧ್ಯಾರ್ಥಿಗಳು ಪ್ರಾರ್ಥಿಸಿದರು. ಸುನೀತಾ ದೇಸಾಯಿ ನಿರೂಪಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ವಿವಿಧ ಕ್ರೀಡೆ, ಪ್ರಬಂಧ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಶಸ್ತಿ ಪತ್ರ ನೀಡುವ ಮೂಲಕ ಗೌರವಿಸಿದರು. ಶಾಸಕ ಆಸೀಫ್ ಸೇಠ್, ಪಾಲಿಕ ಆಯುಕ್ತ ಅಶೋಕ ದುಡಗುಂಟಿ, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಸ್.ಎನ್.ಬಾನಸಿ, ವಿವಿಧ ಶಾಲಾ ಮಕ್ಕಳು, ವಸತಿ ಶಾಲಾ ಮಕ್ಕಳು, ಗಣ್ಯರು, ಮುಖಂಡರು, ಸಾರ್ವಜನಿಕರು ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಡಿ.ದೇವರಾಜ ಅರಸು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಕರ್ಷಕ ಮೆರವಣಿಗೆಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಚಾಲನೆ ನೀಡಿದರು. ವಿವಿಧ ಜಾನಪದ ಕಲಾತಂಡಗಳೊಂದಿಗೆ ಪ್ರಾರಂಭವಾದ ಮೆರವಣಿಗೆ, ಜಿಲ್ಲಾಧಿಕಾರಿಗಳ ಕಚೇರಿಯಿಂದ ಕುಮಾರ ಗಂಧರ್ವ ರಂಗಮಂದಿರಕ್ಕೆ ಆಗಮಿಸಿ ಸಮಾರೋಪಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net