ಅರಸು ವಿಚಾರಧಾರೆ ಯುವಜನತೆಗೆ ಆದರ್ಶ

udp-20-arasu
Published on

ಉಡುಪಿ: ರಾಷ್ಟ್ರ ಕಂಡ ಮಹಾನ್​ ಮುತ್ಸದ್ದಿ ರಾಜಕಾರಣಿಗಳಲ್ಲಿ ಅಗ್ರಗಣ್ಯರಾದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ದೀರ್ಘಕಾಲ ಆಡಳಿತ ನಡೆಸಿ, ಹಿಂದುಳಿದ ವರ್ಗದವವರನ್ನು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ವಿಚಾರಧಾರೆ ಯುವ ಪೀಳಿಗೆಗೆ ಆದರ್ಶವಾಗಿದೆ ಎಂದು ಶಾಸಕ ಯಶ್​ಪಾಲ್​ ಎ. ಸುವರ್ಣ ಹೇಳಿದರು.

ಮಂಗಳವಾರ ಮಿಷನ್​ ಕಂಪೌಂಡ್​ನ ಬಳಿಯ ಬಡಗಬೆಟ್ಟು ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿ ಜಗನ್ನಾಥ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು 109ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಉಳುವವನೆ ಒಡೆಯ ಕಾರ್ಯಕ್ರಮದ ಮೂಲಕ ರೈತರ ಬದುಕಿಗೆ ಆಶಾಕಿರಣವಾಗಿದ್ದರು. ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ಅಗಮಿಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಮೂಲಭೂತ ಸೌಕರ್ಯ ಸೇರಿದಂತೆ ಹಾಸ್ಟೆಲ್​ಗಳ ನಿಮಾರ್ಣ, ಮೀಸಲಾತಿ ನಿಯಮಗಳ ಮೂಲಕ ಹಿಂದುಳಿದ ವರ್ಗಗಳ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಎಲ್ಲಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಬೇಕು ಎಂಬ ಉದ್ದೇಶದಿಂದ ಹಿಂದುಳಿದ ವರ್ಗಗಳ ಜನರಿಗೆ ಶೇ. 27 ರಷ್ಟು ಮೀಸಲಾತಿಯನ್ನು ಕಲ್ಪಿಸುವ ಕೆಲಸ ಮಾಡಿದ್ದಾರೆ ಎಂದರು.

ಉಪ ಪೊಲೀಸ್​ ಅಧೀಕ್ಷಕ ಡಿ.ಟಿ ಪ್ರಭು ಉಪನ್ಯಾಸ ನೀಡಿ, ಅರಸು ದೇಶದಲ್ಲಿ ಮೊದಲ ಬಾರಿಗೆ ಉಳುವವನೇ ಭೂ ಒಡೆಯ ಕಾನೂನು ಜಾರಿಗೆ ತರುವಲ್ಲಿ ಶ್ರಮಿಸಿದ್ದರು. ಮಲಹೊರುವ ಪದ್ಧತಿ ನಿಷೇಧಕ್ಕೆ ಒತ್ತು ನೀಡುವುದರ ಜೊತೆಗೆ ಪೌರಾಡಳಿತ ಸಂಸ್ಥೆಗಳಲ್ಲಿ ಖಾಯಂ ಹುದ್ದೆಗಳನ್ನು ನೀಡುವ ಕೆಲಸ ಮಾಡಿದ್ದರು. ಕೇಂದ್ರದ 20 ಅಂಶಗಳು ಸೇರಿದಂತೆ ನೂರಾರು ಕಾಯಿದೆಗಳನ್ನು ಅನುಷ್ಠಾನಗೊಳಿಸಿದರು ಎಂದರು.

ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಸ್​.ಎಸ್​.ಎಲ್​.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್​ಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಜಿಲ್ಲಾ ಪೊಲೀಸ್​ ಅಧೀಕ್ಷಕ ಡಾ. ಅರುಣ್​ ಕೆ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್​., ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಾಧಾಕೃಷ್ಣ ಅಡಿಗ, ಪೌರಾಯುಕ್ತ ರಾಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್​, ಉಡುಪಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಎಲ್ಲಮ್ಮ, ಡಿ.ದೇವರಾಜ ಅರಸು ಪ್ರಶಸ್ತಿ ವಿಜೇತ ಮಲ್ಪೆ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಾಕಪ್ಪ ಆರ್​. ಲಮಾಣಿ ಸ್ವಾಗತಿಸಿ, ಉಡುಪಿ ತಾಲೂಕು ವಿಸ್ತರಣಾಧಿಕಾರಿ ಶ್ರೀಕಾಂತ್​ ನಿರೂಪಿಸಿ, ಇಲಾಖೆಯ ಲೆಕ್ಕ ಅಧೀಕ್ಷಕಿ ಸುಗುಣ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net