ದೇವರಾಜ ಅರಸು ನೈತಿಕ ರಾಜಕಾರಣದ ಕಾಂತಿ ಪುರುಷ : ಮಾಜಿ ಸಚಿವೆ ರಾಣಿ ಸತೀಶ್ ಬಣ್ಣನೆ

Published on

ಮೈಸೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ನೈತಿಕ ರಾಜಕಾರಣದ ಕಾಂತಿ ಪುರುಷರು ಮಾಜಿ ಸಚಿವೆ ರಾಣಿ ಸತೀಶ್ ಬಣ್ಣಿಸಿದರು.

ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬುಧವಾರ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಜಯಂತಿ ಉದ್ಘಾಟಿಸಿ ಮಾತನಾಡಿ, ಹಿಂದುಳಿದ ವರ್ಗದ ಮಹಿಳೆಯರಿಗೆ ರಾಜಕೀಯವಾಗಿ ಸ್ಥಾನಮಾನಗಳನ್ನು ಕಲ್ಪಿಸಿಕೊಡುವಲ್ಲಿ ದೇವರಾಜ ಅರಸು ಅವರ ಪಾತ್ರ ಪ್ರಮುಖವಾದದ್ದು. ಹಿಂದುಳಿದ ವರ್ಗಕ್ಕೆ ಮೀಸಲಾತಿಯನ್ನು ತರುವಲ್ಲಿ ಅವರ ಪಾತ್ರ ಹೆಚ್ಚಿತ್ತು. ಮಹಿಳೆಯರಿಗೆ ವಿಧವಾ ವೇತನ, ವೃದ್ಧಾಪ್ಯ ವೇತನ ಜಾರಿ ಮಾಡಿ ಆರ್ಥಿಕ ಸಬಲೀಕರಣ ಮತ್ತು ಭದ್ರತೆಗೆ ಅರಸು ಅಡಿಗಲ್ಲು ಹಾಕಿದರು ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎನ್.ಎಸ್. ರಂಗರಾಜು ಮಾತನಾಡಿ, ಡಿ. ದೇವರಾಜ ಅರಸು ಅವರು ಸಾರ್ವಕಾಲಿಕ ಹಿಂದುಳಿದ ವರ್ಗಗಳ ಚಿರಸ್ಮರಣಿಯ ನಾಯಕರಾಗಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಸರ್ಕಾರವನ್ನು ಮುನ್ನಡೆಸಿ ಹಲವು ಯೋಜನೆಗಳನ್ನು ಜಾರಿಗೆ ತಂದು ಬಡವರ ಹಿಂದುಳಿದವರ ಮತ್ತು ದೀನದಲಿತರ ಪಾಲಿನ ಆಶಾಕಿರಣವಾದರು ಎಂದು ಸ್ಮರಿಸಿದರು.

ಉಳುವವನೇ ಭೂಮಿಯ ಒಡೆಯ ಕಾನೂನನ್ನು ದೇಶದಲ್ಲೇ ಪ್ರಥಮ ಬಾರಿಗೆ ಜಾರಿಗೆ ತಂದು ಬಡವರ ಪಾಲಿನ ಆರಾಧ್ಯ ದೈವವಾಗಿ ರೂಪುಗೊಂಡರು. ದಿಟ್ಟತನದಿಂದ ಅವರು ಮಾಡಿದ ಈ ಪ್ರಯತ್ನದ ಫಲದಿಂದ ಇಂದು ಕರ್ನಾಟಕದಲ್ಲಿ ಬಹುತೇಕ ಜನರು ಊಟ ಮಾಡುವಂತೆ ಆಗಿದೆ ಎಂದರು.

ಈ ಸಂದರ್ಭ ಪಿರಿಯಾಪಟ್ಟಣದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಚನ್ನಬಸಪ್ಪ ಅವರ ಪ್ರತಿಮೆಯನ್ನು ಮೈಸೂರಿನ ಪ್ರಮುಖ ಸ್ಥಳದಲ್ಲಿ ಸ್ಥಾಪಿಸಲು ಹಾಗೂ ಪ್ರತಿ ವರ್ಷ ಕಾಂಗ್ರೆಸ್ ಭವನದಲ್ಲಿ ಚನ್ನಬಸಪ್ಪ ಜಯಂತಿ ಆಚರಿಸುವ ತೀರ್ಮಾನ ಕೈಗೊಳ್ಳಲಾಯಿತು.

ವಿಧಾನ ಪರಿಷತ್ ಮಾಜಿ ಮರಿತಿಬ್ಬೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಪದಾಧಿಕಾರಿಗಳಾದ ಹೆಡತಲೆ ಮಂಜುನಾಥ್, ಶಿವಣ್ಣ, ಎಂ. ಶಿವಪ್ರಸಾದ್, ನಾಗೇಶ್, ಎನ್.ಸೋಮಣ್ಣ, ಮಲ್ಲೇಶ್, ಲತಾ ಸಿದ್ದಶೆಟ್ಟಿ, ಪುಷ್ಪಲತಾ ಚಿಕ್ಕಣ್ಣ, ಮೋದಮಣಿ, ಮಂಜುಳಾ ಮಾನಸ, ಶ್ಯಾಮ್, ಯೋಗೇಶ್, ಭಾಸ್ಕರ್‌ ಗೌಡ, ವೆಂಕಟಸುಬ್ಬಯ್ಯ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net