

ಮಂಡ್ಯ: ಶ್ರೀರಂಗಪಟ್ಟಣ ಹಿಂದುಳಿದ ಜಾತಿ ಜನರ ಬಡತನ ನಿರ್ಮೂಲನೆಗೆ ಹಲವು ಸುಧಾರಣೆ ಹಾಗೂ ಉಳುವವನೆ ಭೂಮಿ ಒಡೆಯ ಕಾನೂನು ಜಾರಿಯಾಗಲು ಡಿ.ದೇವರಾಜ ಅರಸು ಅವರ ಕೊಡುಗೆ ಅಪಾರ ಎಂದು ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತದ ಎಲ್ಲ ಇಲಾಖೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಅವರ 109ನೇ ಜಯಂತಿ ಕಾರ್ಯಕ್ರಮದಲ್ಲಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಅವರು ಮಾತನಾಡಿದರು.
ಬಡತನ ನಿರ್ಮೂಲನವೇ ತಮ್ಮ ಮೊದಲ ಆದ್ಯತೆ ಎಂದು ಹಿಂದುಳಿದ ಜಾತಿ, ವರ್ಗಗಳ ಜನರ ಏಳಿಗೆಗೆ ಶ್ರಮಿಸಿ ಜನಸಾಮಾನ್ಯರ ಮುಖ್ಯಮಂತ್ರಿ ಎನಿಸಿಕೊಂಡವರು ಅರಸು. ಉಳುವವನಿಗೆ ಭೂಮಿ ಕಾಯ್ದೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಸತಿ, ಆಹಾರದೊಂದಿಗೆ ಶಿಕ್ಷಣ, ಪ್ರತಿ ಮನೆಯಲ್ಲೂ ವಿದ್ಯುತ್ ದೀಪ, ವಲಸೆ ಕಾರ್ಮಿಕರಿಗೆ ಆಶ್ರಯ ಯೋಜನೆಯಡಿ ಕಟ್ಟಡ, ಗ್ರಾಮೀಣ ಸಾಲ ಮನ್ನಾ ಇಂತಹ ಹಲವು ಜನಪರ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಿ ಸಮಾಜದಲ್ಲಿ ಸಮಾನತೆಯ ಸುಧಾರಣೆ ತರುವಲ್ಲಿ ಅವರ ಪಾತ್ರ ಮಹತ್ವಪೂರ್ಣಗಿತ್ತು ಎಂದು ಸ್ಮರಿಸಿದರು.
ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿ, ಡಿ.ದೇವರಾಜ ಅರಸು ಅವರು ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವ ಗುಣ ಹೊಂದಿದವರು. ರೈತಾಪಿ ಜೀವನ ಸೇರಿದಂತೆ ಸಾಮಾಜಿಕ ಪರಿಸ್ಥಿತಿಯನ್ನು ಹತ್ತಿರದಿಂದ ಬಲ್ಲವರಾಗಿದ್ದ ಅವರು ಮುಖ್ಯಮಂತ್ರಿಯಾಗಿ ರಾಜ್ಯದ ಹಿಂದುಳಿದ ವರ್ಗಗಳ ಅಸಂಖ್ಯಾತ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ನಿರ್ಮಿಸಿದರು ಎಂದರು.
ಕಾರ್ಯಕ್ರಮದಲ್ಲಿ ತಾಪಂ ಇಒ ವೇಣು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅಧಿಕಾರಿ ಪುಷ್ಪಾ, ಬಿಇಒ ಆರ್.ಪಿ.ಮಹೇಶ್, ಎಡಿಎಲ್‌ಆರ್ ಮೇಘನಾ, ಸಿಡಿಪಿಒ ಧನಲಕ್ಷ್ಮೀ, ಉಪನೊಂದಣಾಧಿಕಾರಿ ಮಂಜುದರ್ಶಿನಿ, ಕಾರ್ಮಿಕ ವೃತ್ತ ನೀರಿಕ್ಷಕ ಹೇಮಂತ್, ರಾಜಸ್ವ ನೀರಿಕ್ಷಕ ರೇವಣ್ಣ, ಕರವೇ ಚಂದಗಾಲು ಶಂಕರ್, ಕೆ.ಶೆಟ್ಟಹಳ್ಳಿ ಗಂಗಣ್ಣ, ಕುಬೇರ ಇತರರು ಉಪಸ್ಥಿತರಿದ್ದರು.