ಸಂಜೀವರಾಯಸ್ವಾಮಿ ನೆಲೆಬೀಡು ದೇವರಹೊಸಹಳ್ಳಿ

gramayan devarahosalli
Published on

* ವಿಜಯನಗರ ಕಾಲದಲ್ಲಿ ದೇಗುಲ ನಿರ್ಮಾಣ

* ಸಾಲಿಗ್ರಾಮದ ಹರಳುಗಳಿಂದ ಹನುಮ ವಿಗ್ರಹ ಪ್ರತಿಷ್ಠಾಪನೆ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ತಾಲೂಕಿನ ದೇವರಹೊಸಹಳ್ಳಿ ಹೆಸರೇ ಸೂಚಿಸುವಂತೆ ‘ಕ್ತರ ಪಾಲಿನ ದೈವಶಕ್ತಿಯನ್ನೊಳಗೊಂಡ ಗ್ರಾಮವಾಗಿದ್ದು, ಶ್ರೀ ಸಂಜೀವರಾಯಸ್ವಾಮಿ ನೆಲೆನಿಂತಿರುವ ಪುಣ್ಯಭೂಮಿಯಾಗಿ ಪ್ರಖ್ಯಾತಿ ಪಡೆದಿದೆ.

ಹೌದು, ನಗರ ಕೇಂದ್ರದಿಂದ ಮೂರು ಕಿಮೀ ದೂರವಿರುವ ದೇವರಹೊಸಹಳ್ಳಿ ತಾಲೂಕಿನ ವಿಶಿಷ್ಟ ಗ್ರಾಮಗಳಲ್ಲೊಂದು. 250 ಹೆಚ್ಚು ಕುಟುಂಬಗಳು ಹಾಗೂ 2000 ಕ್ಕೂ ಹೆಚ್ಚು ಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಒಕ್ಕಲಿಗರು, ದಲಿತರು, ಬ್ರಾಹ್ಮಣ, ಸವಿತಾ ಸಮಾಜ ಸೇರಿ ಹಲವು ಜಾತಿಜನಾಂಗಗಳು ಸಹಬಾಳ್ವೆಯ ಜೀವನ ಸಾಗಿಸುತ್ತಿವೆ.

ಬೇಡಿದ ವರ ನೀಡುವ ಕಲ್ಪವೃಕ್ಷ!

ಈ ಗ್ರಾಮ ಪ್ರಮುಖವಾಗಿ ವೈಷ್ಣವ ಕ್ಷೇತ್ರವಾಗಿದ್ದು, ನಂಬಿದವರ ಕಾಮದೇನು, ಆರಾಧಿಸುವವರ ಕಲ್ಪವೃಕ್ಷ ಎನಿಸಿರುವ ಪುರಾಣ ಪ್ರಸಿದ್ಧ ಸಂಜೀವರಾಯಸ್ವಾಮಿ ದೇಗುಲ ವಿಜಯನಗರ ಕಾಲದಲ್ಲಿ ನಿರ್ಮಾಣವಾಗಿದ್ದು ಎನ್ನಲಾಗಿದೆ. ಈ ದೇವಸ್ಥಾನಕ್ಕೆ ಮೊದಲು ಪ್ರಸನ್ನ ಆಂಜನೇಯ ದೇವಸ್ಥಾನವೆಂದು ಕರೆಯುತ್ತಿದ್ದು, ಶ್ರೀ ವ್ಯಾಸರಾಯರು ಸ್ಥಾಪಿಸಿದ ದೇವಸ್ಥಾನ ಎಂದು ಇತಿಹಾಸ ಹೇಳುತ್ತದೆ. ಸಂಜೀವರಾಯಸ್ವಾಮಿ ಬಹಳ ಶಕ್ತಿವಂತನಾಗಿದ್ದು, ಸಾಲಿಗ್ರಾಮದ ಹರಳುಗಳಿಂದ ಹನುಮ ವಿಗ್ರಹ ಪ್ರತಿಷ್ಠಾಪನೆಯಾಗಿದೆ. ವ್ಯಾಸಮಹರ್ಷಿಗಳು ಬೆಂಕಿಯ ಕೆಂಡದ ಮೂಲಕ ಹನುಮನ ರೂಪ ನೀಡಿದ್ದಾರೆ ಎಂಬುದು ಪುರಾಣದ ಕಥೆಯಾಗಿದೆ. ಸಂಜೀವರಾಯಸ್ವಾಮಿ ಮೂರ್ತಿ ಸೌಮ್ಯವಾಗಿದೆ. ಆತನ ಮೊರೆ ಹೋದರೆ ಮನುಷ್ಯನ ಮಾನಸಿಕ, ದೈಹಿಕ ರೋಗ ನಿವಾರಣೆಯಾಗುತ್ತದೆಂಬ ಪ್ರತೀತಿ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಭಾಗದ ಸಾವಿರಾರು ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಸ್ವಾಮಿಯ ಮೊರೆ ಹೋಗುತ್ತಾರೆ ಎನ್ನುತ್ತಾರೆ ದೇವಸ್ಥಾನದ ಅರ್ಚಕ ದಯಾನಿಧಿ ಜನಾರ್ದನ್ ಹಾಗೂ ಸುದರ್ಶನ್.

ಆಷಾಢದಲ್ಲಿ ಜಾತ್ರೆ!

ಆಷಾಢ ಮಾಸದಲ್ಲಿ ಗ್ರಾಮದಲ್ಲಿ ನಡೆಯುವ ಜಾತ್ರೆಗೆ ಹೊಸದಾಗಿ ವಿವಾಹವಾದ ವಧು-ವರರು ಹೆಚ್ಚಾಗಿ ಬರುವುದು ವಿಶೇಷ. ಆಷಾಢ ಮಾಸದ ಅಮಾವಾಸ್ಯೆಯ ಹಿಂದಿನ ದಿನ ಏಕಾದಶಿಯ ಉಪವಾಸದ ಹಬ್ಬಕ್ಕೆ ಹೊಸ ಮದುಮಗಳನ್ನು ಅತ್ತೆ ಮನೆಯಿಂದ ತವರು ಮನೆಗೆ ಕಳುಹಿಸುವುದು ಸಂಪ್ರದಾಯ. ನಂತರ ಹುಣ್ಣಿಮೆ ಬರುವ ಮೊದಲು ನವ ವಿವಾಹಿತನನ್ನು ಕರೆಯಿಸಿ ಕುಶಲೋಪರಿ ವಿಚಾರಿಸಿ, ನಂತರ ದಂಪತಿಗಳನ್ನು ಜಾತ್ರೆಯಲ್ಲಿ ಶ್ರೀ ಸಂಜೀವರಾಯಸ್ವಾಮಿಯ ದರ್ಶನಕ್ಕೆ ಕಳುಹಿಸಿ ಕೊಡುವುದು ವಾಡಿಕೆ. ನವದಂಪತಿಗಳು ಲಕ್ಷ್ಮೀವೆಂಕಟೇಶ್ವ ಸ್ವಾಮಿಯನ್ನು ಪೂಜಿಸಿ, ದರ್ಶಿಸಿದರೆ ಒಳ್ಳೆಯದಾಗುತ್ತೆ ಎಂಬ ನಂಬಿಕೆ ಇದೆ. ಇದರಿಂದ ಗ್ರಾಮದಲ್ಲಿ ನಡೆಯುವ ಜಾತ್ರೆ ಆಷಾಢ ಜಾತ್ರೆಯಂದೇ ಪ್ರಸಿದ್ಧವಾಗಿದೆ ಎನ್ನುತ್ತಾರೆ ಗ್ರಾಮದ ಶ್ರೀಕಂಠು ಹಾಗೂ ಡಿ.ಬಿ.ಚೇತನ್ ಕುಮಾರ್.

ನಮ್ಮ ಗ್ರಾಮ ತಾಲೂಕಿನ ಪ್ರಮುಖ ಕಾರ್ಮಿಕ ಜಾಗೃತ ಕ್ಷೇತ್ರವಾಗಿದ್ದು, ಪ್ರಸಿದ್ಧಿ ಪಡೆದಿದೆ. ಪುರಂದರದಾಸರು ಕ್ಷೇತ್ರಕ್ಕೆ ‘ಭೇಟಿ ನೀಡಿದ ವೇಳೆ ಸಂಜೀವರಾಯಸ್ವಾಮಿಯ ಮೂರ್ತಿಯನ್ನು ನೋಡಿ ಅಂಜಿಕೆ ಇನ್ನು ಏತಕ್ಕಯ್ಯ, ಭಯವು ಇನ್ನು ಏತಕಯ್ಯ ಸಂಜೀವರಾಯನ ನೆನೆದ ಮೇಲೆ’ ಎಂಬ ಕೀರ್ತನೆ ರಚಿಸಿದ್ದಾರೆ ಎನ್ನುವ ಮಾತಿದೆ ಎನ್ನುತ್ತಾರೆ ನಿವೃತ್ತ ಉಪ ಪ್ರಾಂಶುಪಾಲ ಡಿ.ದೊಡ್ಡೇಗೌಡ, ಮುಖಂಡರಾದ ಡಿ.ಕೆ.ಸಿದ್ದೇಗೌಡ ಹಾಗೂ ಡಿ.ಬಿ.ಬಸವರಾಜು.

ದೇವರಹೊಸಹಳ್ಳಿ ದಂಟು!

ನಗರಕ್ಕೆ ಹೊಂದಿಕೊಂಡಿದ್ದರೂ ಇಂದಿಗೂ ಅಪ್ಪಟ ಗ್ರಾಮೀಣ ಸೊಗಡನ್ನು ಉಳಿಸಿಕೊಂಡಿರುವುದು ಈ ಗ್ರಾಮದ ವಿಶೇಷ. ಈ ಹಿಂದೆ ಗ್ರಾಮದಲ್ಲಿ ಬೆಳೆಯುವ ದಂಟಿನ ಸೊಪ್ಪಿಗೆ ವಿಶೇಷ ಬೇಡಿಕೆಯಿತ್ತಂತೆ. ದೇವರಹೊಸಳ್ಳಿ ದಂಟು ಎಂದೇ ಮಾರುಕಟ್ಟೆಯಲ್ಲಿ ಹೆಸರುಗಳಿಸಿತ್ತು ಎಂಬುದನ್ನು ಇಲ್ಲಿನ ಹಿರಿಯರು ನೆನೆಯುತ್ತಾರೆ. ಕೃಷಿ ಹಾಗೂ ಹೈನುಗಾರಿಕೆ ಇಲ್ಲಿನ ಜನರ ಜೀವಾಳವಾಗಿದ್ದು, ನಾನಾ ಬೆಳೆಗಳನ್ನು ಇಲ್ಲಿನ ರೈತರು ಬೆಳೆಯುತ್ತಾರೆ. ಇದರೊಂದಿಗೆ, ಹೈನುಗಾರಿಕೆ ಹಾಗೂ ಕುರಿಸಾಕಣೆಯನ್ನು ನೆಚ್ಚಿಕೊಂಡಿದ್ದಾರೆ.

ಕಲೆಗಳು ಜೀವಂತ!!

ಈ ಗ್ರಾಮ ಸಾಂಸ್ಕೃತಿಕವಾಗಿಯೂ ಸಾಕಷ್ಟು ಶ್ರೀಮಂತವಾಗಿದೆ. ಈ ಹಿಂದೆ ಈ ಗ್ರಾಮದಲ್ಲಿ ವಿಶೇಷವಾದ ಗಾಳಿಪಟ ಸ್ಪರ್ಧೆ  ನಡೆಯುತ್ತಿದ್ದವು. ಈಗಲೂ ಗ್ರಾಮದ ಹಲವರು ಉತ್ತಮವಾಗಿ ಪಟ ಕಟ್ಟುವ ಕೈಚಳಕ ಹೊಂದಿದ್ದಾರೆ. ಆಷಾಢ ಮಾಸದಲ್ಲಿ ಗಾಳಿಪಟ ಹಾರಿಸುವುದು ಗ್ರಾಮೀಣ ಪ್ರದೇಶದ ಮನರಂಜನೆಗಳಲ್ಲೊಂದು. ಗ್ರಾಮದ ಕೆಲವರು ಈಗಲೂ ವಿವಿದೆಡೆ ನಡೆಯುವ ಗಾಳಿಪಟ ಹಾರಿಸುವ  ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಇದರೊಂದಿಗೆ ಪೂಜಾಕುಣಿತ, ‘ಧ್ವಜ ಕುಣಿತ, ಡೊಳ್ಳು ಕುಣಿತ, ತಮಟೆ ಕಲಾವಿದರ ತಂಡಗಳನ್ನು ಗ್ರಾಮದಲ್ಲಿ ಕಾಣಬಹುದಾಗಿದೆ. ಗ್ರಾಮದ ಕಲಾವಿದರು ಹಲವೆಡೆ ಜಾನಪದ ಕಲೆ ಪ್ರದರ್ಶನ ಮಾಡುತ್ತಿದ್ದಾರೆ. ಇದಲ್ಲದೇ ಪೌರಾಣಿಕ ಹಾಗೂ ಸಾಮಾಜಿಕ ನಾಟಕ ಕಲಾವಿದರು ಗ್ರಾಮದಲ್ಲಿದ್ದಾರೆ.

ಸ್ವಾತಂತ್ರ್ಯಕ್ಕೂ ಕೊಡುಗೆಯುಂಟು!!

ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ಗ್ರಾಮದ ಕೊಡುಗೆ ಇರುವುದು ವಿಶೇಷ. ಅಂದಿನ ಸ್ವಾತಂತ್ರ್ಯ ಹೋರಾಟದ ಕಿಚ್ಚು ಗ್ರಾಮಕ್ಕೂ ಅವರಿಸಿತ್ತು ಎನ್ನಲಾಗಿದ್ದು, ಗ್ರಾಮದ ಡಿ.ಆರ್.ಲಿಂಗಯ್ಯ, ದ್ಯಾವಯ್ಯ, ಕೆಂಪಯ್ಯ, ರಾಮಸ್ವಾಮಿ, ಕಲ್ಯಾಣಿಗೌಡ ಎಂಬುವವರು ಸ್ವಾತಂತ್ರ್ಯ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ, ಬೈರಾಗಿ ಕೆಂಪೇಗೌಡರು, ಖ್ಯಾನ ನಟಿ ಬಿ.ಸರೋಜಾದೇವಿ ಸೇರಿ ಹಲವು ಖ್ಯಾತನಾಮರು ಗ್ರಾಮದ ನಂಟು ಹೊಂದಿದ್ದರು. ಈ ಗ್ರಾಮ ಸೌಹಾರ್ದತೆ ಹಾಗೂ ಸಹಬಾಳ್ವೆಯ ಬದುಕಿಗೂ ಮಾದರಿಯಾಗಿ ನಿಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net