

ದೇವರಹಿಪ್ಪರಗಿ: ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುವುದರ ಜತೆಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.
ಸೋಮವಾರ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಹಾಗೂ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಂತ್ರಿಕ ಯುಗಕ್ಕೆ ಹೊಂದಿಕೊಳ್ಳುವಂತೆ ಸರ್ಕಾರ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡುತ್ತಿದ್ದು, ಟ್ಯಾಬ್ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿ ಅದನ್ನು ಶೈಕ್ಷಣಿಕ ಚಟುವಟಿಕೆಗೆ ಸದುಪಯೋಗಪಡಿಸಿಕೊಂಡು ಉತ್ತಮ ಅಂಕಗಳೊಂದಿಗೆ ಪ್ರಗತಿ ಹೊಂದಬೇಕು ಎಂದರು.
ಆರೋಗ್ಯ ಇಲಾಖೆ ಮೂಲಕ ಕೋವಿಡ್ ತಡೆಯುವ ನಿಟ್ಟಿನಲ್ಲಿ ಲಸಿಕೆ ನೀಡಲಾಗುತ್ತಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆದು ಕರೊನಾ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಬೇಕು. ಯಾವುದೇ ವದಂತಿಗೆ ಕಿವಿಗೊಡದೆ ಲಸಿಕೆ ಪಡೆದುಕೊಳ್ಳಬೇಕು ಎಂದರು.
ಪ್ರಭಾರಿ ತಹಸೀಲ್ದಾರ್ ಸಂಜೀವಕುಮಾರ ದಾಸರ ಮಾತನಾಡಿ, ಕರೊನಾ ಸಂಕಷ್ಟ ನಿವಾರಣೆಗೆ ಎಲ್ಲರ ಸಹಕಾರ ಮಹತ್ವದ್ದಾಗಿದೆ. ಎಲ್ಲರೂ ಲಸಿಕೆ ಪಡೆಯಬೇಕು. ಕರೊನಾ ನಿಯಂತ್ರಿಸುವಲ್ಲಿ ಶಾಸಕರು ಸಾಕಷ್ಟು ಸಹಕಾರ ನೀಡಿದ್ದಾರೆ. ನಾವೆಲ್ಲ ಅವರ ಬೆಂಬಲದೊಂದಿಗೆ ಕರೊನಾ ಹಾವಳಿ ತಡೆಗಟ್ಟಲು ತಾಲೂಕು ಆಡಳಿತ ಸನ್ನದ್ಧವಾಗಿದೆ ಎಂದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ ವೈದ್ಯ ಸಂತೋಷ ಯಡಹಳ್ಳಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಅಶೋಕ ಹೆಗಡೆ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ರಾಮನಗೌಡ ಕನ್ನೊಳ್ಳಿ, ಪಿಎಸ್‌ಐ ರವಿ ಯಡಣ್ಣವರ, ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಕಾಲೇಜಿನ ಅಧೀಕ್ಷಕ ಜಗನ್ನಾಥ ಸಜ್ಜನ, ಆರೋಗ್ಯ ನಿರೀಕ್ಷಕ ಫೀರೋಜ್ ಮುಲ್ಲಾ ಸೇರಿದಂತೆ ಆರೋಗ್ಯ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಕಾಲೇಜು ಸಿಬ್ಬಂದಿ ಇದ್ದರು.