ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ

dhp-1-1a
Published on

ದೇವರಹಿಪ್ಪರಗಿ: ನಮ್ಮ ಪಕ್ಷ ಅಭಿವೃದ್ಧಿಗೆ ಮಹತ್ವ ನೀಡಿದೆ. ಈ ಮೊದಲು ಪ್ರತಿ ಗ್ರಾಮದಲ್ಲಿ ಉಂಟಾಗಿದ್ದ ನೀರಿನ ಸಮಸ್ಯೆ ಪರಿಹರಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ ಆತ್ಮಸಾಕ್ಷಿಯಾಗಿ ಕಾರ್ಯ ನಿರ್ವಹಿಸಿರುವೆ. ಕಾಂಗ್ರೆಸ್ ಸಾಧನೆ ನೋಡಿ ಸುನೀಲಗೌಡ ಪಾಟೀಲ ಅವರನ್ನು ಗೆಲ್ಲಿಸಬೇಕೆಂದು ಮಾಜಿ ಸಚಿವ, ಬಬಲೇಶ್ವರ ಶಾಸಕ ಡಾ. ಎಂ. ಬಿ. ಪಾಟೀಲ ಹೇಳಿದರು.

ಪಟ್ಟಣದ 1008 ಪಂಚಾಚಾರ್ಯರ ಕಲ್ಯಾಣ ಮಂಟಪದಲ್ಲಿ ಬುಧವಾರ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆ ಅಂಗವಾಗಿ ಹಮ್ಮಿಕೊಂಡ ಗ್ರಾಮ ಪಂಚಾಯಿತಿ, ಪಪಂ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಂಗ್ರೆಸ್ ಪಾರ್ಟಿ ಲೀಡಿಂಗ್ ಪಾರ್ಟಿಯಾಗಿದ್ದು, ಬಹುತೇಕ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಪಕ್ಷಾತೀತವಾಗಿ ಬೆಂಬಲಿಸುತ್ತಿದ್ದಾರೆ. ಜಿಲ್ಲೆಯಲ್ಲಷ್ಟೇ ಅಲ್ಲದೆ, ರಾಜ್ಯದ ತುಂಬ ಓಡಾಡಿ ನೀರಾವರಿಗಾಗಿ ಶ್ರಮಿಸಿರುವೆ. ಅದಕ್ಕೆ ನೀರಾವರಿ ಯೋಜನೆಗಳೇ ಸಾಕ್ಷಿಯಾಗಿವೆ. ಇಡೀ ರಾಜ್ಯದ ರೈತಾಪಿ ವರ್ಗ ನಮ್ಮ ಸರ್ಕಾರವನ್ನು ನೆನೆಸುತ್ತದೆ. ನಮ್ಮ ಪಕ್ಷದ ಸಾಧನೆ ಗುರುತಿಸಿ ಇಂದಿನ ಸಭೆಯಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದ 590 ಸದಸ್ಯರಲ್ಲಿ 508 ಜನ ಹಾಜರಾಗಿದ್ದಾರೆ ಎಂದರು.

ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಮಾತನಾಡಿ, ಮೂರು ವರ್ಷದ ಅಧಿಕಾರಾವಧಿಯಲ್ಲಿ ಗ್ರಾಪಂಗಳಿಗೆ ಹೆಚ್ಚಿನ ಸೌಲಭ್ಯ ತರಲು ಹೋರಾಡಿದ್ದೇನೆ. ಕೋವಿಡ್ ಸಂದರ್ಭದಲ್ಲಿ ನನ್ನ ಎಲ್ಲ ಅನುದಾನ ಬಳಸಿ ಸಿಂಪಡಣಾ ಯಂತ್ರ ನೀಡಿ ಸದುಪಯೋಗಪಡಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಸ್ಥಳೀಯ ಸಂಸ್ಥೆ ಸದಸ್ಯರ ಗೌರವ ಸಂಭಾವನೆ ಹೆಚ್ಚಿಸಲು ಅವಿರತ ಶ್ರಮ ವಹಿಸುತ್ತೇನೆ. ಅಭಿವೃದ್ಧಿ ಕಾರ್ಯಗಳು ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ಮೂಲಕವೇ ಜಾರಿಯಾಗಬೇಕೆಂದು ಹೋರಾಡುತ್ತೇನೆ. ಪ್ರಥಮ ಪ್ರಾಶಸ್ತ್ಯದ ಮತ ನೀಡಿ ನನ್ನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ.ರಾಜು ಆಲಗೂರ, ಮುಖಂಡರಾದ ಸುಭಾಷ ಛಾಯಾಗೋಳ, ಬಿ.ಎಸ್. ಪಾಟೀಲ ಯಾಳಗಿ, ಎಸ್. ಎಂ. ಪಾಟೀಲ ಗಣಿಹಾರ, ಅಶೋಕ ಶಾಬಾದಿ, ವಿದ್ಯಾರಾಣಿ ತುಂಗಳ, ಸಂಗಮೇಶ ಛಾಯಾಗೋಳ ಮಾತನಾಡಿದರು.

ಕಾಂಗ್ರೆಸ್ ಮುಖಂಡರಾದ ಆನಂದಗೌಡ ದೊಡ್ಡಮನಿ, ಅಬ್ದುಲ್ ಹಮೀದ್ ಮುಶ್ರೀಫ್, ಕಾಂತಾ ನಾಯಿಕ, ನಿಂಗನಗೌಡ ಪಾಟೀಲ, ಬಾಪುಗೌಡ ಪಾಟೀಲ, ಬಶೀರಶೇಠ ಬೇಪಾರಿ, ಸಂಗನಗೌಡ ಹರನಾಳ, ಬಾಳಾಸಾಹೇಬಗೌಡ ಪಾಟೀಲ, ಸರಿತಾ ನಾಯಿಕ, ಭಾರತಿ ಹೊಸಮನಿ, ರಮೀಜಾ ನದಾಫ್, ಎಸ್. ಎಸ್. ಪಾಟೀಲ, ಸುರೇಶಗೌಡ ನಾಡಗೌಡ, ಹಳ್ಳೆಪ್ಪಗೌಡ ಚೌಧರಿ, ಶಿವಾನಂದ ದೇಸಾಯಿ, ಮಲ್ಲನಗೌಡ ಬಿರಾದಾರ, ಅಣ್ಣಾಸಾಹೇಬ ಪಾಟೀಲ, ಸುರೇಶಗೌಡ ಬಿರಾದಾರ, ಮುನೀರ ಬಿಜಾಪುರ, ಪ್ರಕಾಶ ಗುಡಿಮನಿ, ಮುರ್ತುಜ ತಾಂಬೋಳಿ ಸೇರಿದಂತೆ ದೇವರಹಿಪ್ಪರಗಿ ಮತಕ್ಷೇತ್ರದ ಸದಸ್ಯರು, ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net