

ದೇವರಹಿಪ್ಪರಗಿ: ನೂತನ ತಾಲೂಕು ಕೇಂದ್ರವಾಗಿರುವ ದೇವರಹಿಪ್ಪರಗಿ ಪಟ್ಟಣದಲ್ಲಿ ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳಲು ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಬೇಕೆಂದು ಆಗ್ರಹಿಸಿ ಪಟ್ಟಣದ ವಿವಿಧ ಸಂಘಟನೆ ಪದಾಧಿಕಾರಿಗಳು, ಪಪಂ ಸದಸ್ಯರು, ಕ್ರೀಡಾಪಟುಗಳು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕ್ರೀಡಾ ಸಚಿವ ನಾರಾಯಣಗೌಡರಿಗೆ ಮನವಿ ಸಲ್ಲಿಸಿದ್ದಾರೆ.
ಸೋಮವಾರ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ವಿಜಯಪುರಕ್ಕೆ ಆಗಮಿಸಿದ ವೇಳೆ ಅವರನ್ನು ಭೇಟಿ ಮಾಡಿ ಮನವಿ ಅರ್ಪಿಸಿದರು.
ಪಟ್ಟಣದಲ್ಲಿ ಕ್ರೀಡಾಂಗಣವಿಲ್ಲದೆ ಕ್ರೀಡಾಪಟುಗಳಿಗೆ ಸಮಸ್ಯೆಯಾಗಿದೆ. ಕ್ರೀಡಾ ಚಟುವಟಿಕೆಗೆ ಅನುಕೂಲವಾಗುವಂತೆ ಉತ್ತಮ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಶೀಘ್ರ ಕ್ರೀಡಾಂಗಣ ನಿರ್ಮಿಸಲು ಸ್ಥಳ ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.
ದೇವರಹಿಪ್ಪರಗಿ ಪ್ರೀಮಿಯರ್ ಕ್ರಿಕೆಟ್ ಅಧ್ಯಕ್ಷ ರಾಜು ಮೆಟಗಾರ, ಇಕ್ಬಾಲ್ ಬಿಜಾಪುರ, ರಾಜು ಕಾಖಂಡಕಿ, ಅಶೋಕ ಪೂಜಾರಿ, ರವಿ ಹಳ್ಳದಮನಿ ಸೇರಿದಂತೆ ವಿವಿಧ ಸಂಘಟನೆ ಪದಾಧಿಕಾರಿಗಳು, ಕ್ರೀಡಾಪಟುಗಳು, ಸಾರ್ವಜನಿಕರು ಇದ್ದರು.