ಸಮಸ್ಯೆ ನೀಗಿಸುವರೇ ಡಿಸಿ ಸುನೀಲಕುಮಾರ?

VJP Bommanajogi
Published on

ಶಿವಾನಂದ ಕುಂಬಾರ
ದೇವರಹಿಪ್ಪರಗಿ: ‘ಹಳ್ಳಿ ಕಡೆ ಜಿಲ್ಲಾಧಿಕಾರಿ ನಡಿಗೆ’ ಎಂಬ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮಕ್ಕೆ ಬೊಮ್ಮನಜೋಗಿ ಗ್ರಾಮ ಅಣಿಯಾಗಿದ್ದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಬಹುದಿನದ ಸಮಸ್ಯೆಗಳಿಗೆ ಮುಕ್ತಿ ಕಲ್ಪಿಸುವರೇ? ಎಂಬ ಆಶಾಭಾವ ಗ್ರಾಮಸ್ಥರಲ್ಲಿ ಮನೆ ಮಾಡಿದೆ.

ನಿತ್ಯ ನೂರಾರು ಸಮಸ್ಯೆಗಳನ್ನು ಹಾಸಿ ಹೊದ್ದುಕೊಂಡು ಮಲಗುವ ಗ್ರಾಮಸ್ಥರಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದಿಂದ ಅಭಿವೃದ್ಧಿಯ ಆಶಾಕಿರಣ ಗೋಚರಿಸುತ್ತಿದೆ. ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಅನುಭವಿಸುತ್ತಿದ್ದ ತಾಪತ್ರಯಗಳಿಗೆ ಇನ್ನಾದರೂ ಬ್ರೇಕ್ ಬೀಳಲಿದೆ ಎಂಬ ನಿರೀಕ್ಷೆಯಲ್ಲಿ ಜನ ಜಿಲ್ಲಾಧಿಕಾರಿಗಳ ಆಗಮನಕ್ಕೆ ಎದುರು ನೋಡುತ್ತಿದ್ದಾರೆ. ಜಿಲ್ಲಾಧಿಕಾರಿಗಳ ವಾಸ್ತವ್ಯದಿಂದಲಾದರೂ ಗ್ರಾಮ ಉದ್ಧಾರವಾಗುವುದೇ? ಎಂಬ ಕಾತರದಲ್ಲಿದ್ದಾರೆ ಸ್ಥಳೀಯ ನಿವಾಸಿಗಳು.

ಶೈಕ್ಷಣಿಕ ವ್ಯವಸ್ಥೆ
ಗ್ರಾಮದಲ್ಲಿ 1 ರಿಂದ 8 ನೇ ತರಗತಿಯವರೆಗೆ 328 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕೇವಲ 2 ಕೊಠಡಿಗಳು ಮಾತ್ರ ದುರಸ್ತಿಯಾಗಿವೆ. ಉಳಿದ 6 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. 4 ಕೊಠಡಿಗಳು ನಿರ್ಮಾಣ ಹಂತದಲ್ಲಿವೆ. ಹೆಚ್ಚುವರಿ 4 ಕೊಠಡಿಗಳ ಅವಶ್ಯಕತೆ ಇದೆ. 23 ಗುಂಟೆ ಶಾಲೆಯ ಜಾಗೆ ಅತಿಕ್ರಮಣವಾಗಿದೆ. ತಡೆಗೋಡೆ ನಿರ್ಮಿಸುವ ಅವಶ್ಯಕತೆ ಇದೆ.

ಶುದ್ದ ನೀರಿಗೆ ಅಲೆದಾಟ
ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ಹಾಳಾಗಿದೆ. ಗ್ರಾಪಂನಿಂದ ಪೂರೈಕೆಯಾಗುವ ಕುಡಿಯುವ ನೀರು ಕಲುಷಿತವಾಗಿದೆ. ಹೀಗಾಗಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸುವ ಅವಶ್ಯಕತೆ ಇದೆ. ಬೇಸಿಗೆ ಆರಂಭಗೊಳ್ಳುತ್ತಿರುವ ಹಿನ್ನೆಲೆ ಸಕಾಲಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ.

ಬಯಲು ಶೌಚಕ್ಕಿಲ್ಲ ಮುಕ್ತಿ
ವೈಯಕ್ತಿಕ ಶೌಚಗೃಹಗಳಿದ್ದರೂ ಬಳಕೆಗೆ ಯೋಗ್ಯವಾಗಿಲ್ಲ. ಸಾಮೂಹಿಕ ಶೌಚಗೃಹಗಳ ಸ್ಥಿತಿ ಸರಿಯಾಗಿಲ್ಲ. ಮಹಿಳೆಯರು ಶೌಚಕ್ಕಾಗಿ ರಸ್ತೆಗಳ ಇಕ್ಕೆಲಗಳನ್ನೇ ಆಶ್ರಯಿಸಬೇಕಿದೆ. ಬಯಲು ಶೌಚ ವ್ಯವಸ್ಥೆಯಿಂದ ದುರ್ವಾಸನೆ ಹರಡಿದೆ. ಸಾಂಕ್ರಾಮಿಕ ರೋಗಗಳ ಸ್ಥಿತಿ ಹೆಚ್ಚಾಗಿದೆ. ಮಹಿಳೆಯರಿಗಾದರೂ ಶೌಚಗೃಹ ವ್ಯವಸ್ಥೆ ಕಲ್ಪಿಸಬೇಕಿದೆ. ಸಾಮೂಹಿಕ ಶೌಚಗೃಹಗಳ ವ್ಯವಸ್ಥೆ ಹೆಚ್ಚಾಗಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.

ಬಸ್ ಸೌಲಭ್ಯ
ಮುಖ್ಯ ರಸ್ತೆ ಸರಿಯಾಗಿದ್ದರೂ ಬಸ್ ಸೌಕರ್ಯ ಸಮರ್ಪಕವಾಗಿಲ್ಲ. ಹೀಗಾಗಿ ಗ್ರಾಮಸ್ಥರು ಖಾಸಗಿ ವಾಹನಗಳ ಮೊರೆ ಹೋಗಬೇಕಿದೆ. ದೇವರಹಿಪ್ಪರಗಿ, ಸಿಂದಗಿ ಪಟ್ಟಣಕ್ಕೆ ಹೋಗಲು ಟಂಟಂ ಹಾಗೂ ಕ್ರೂಸರ್‌ಗಳೇ ಗತಿ ಎಂಬಂತಾಗಿದೆ. ಖಾಸಗಿ ವಾಹನಗಳಲ್ಲಿ ಸುರಕ್ಷತೆ ಇರುವುದಿಲ್ಲ. ಹೀಗಾಗಿ ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸಬೇಕೆಂಬುದು ಗ್ರಾಮಸ್ಥರ ಆಗ್ರಹ.

ಪಿಂಚಣಿಗಾಗಿ ಅಲೆದಾಟ
ವೃದ್ಧಾಪ್ಯ ವೇತನ, ಅಂಗವಿಕಲ, ವಿಧವಾ ವೇತನ ಫಲಾನುಭವಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಪಿಂಚಣಿ ಮಾಡಿಸಲು ದಲ್ಲಾಳಿಗಳ ಮೊರೆ ಹೋಗಬೇಕು. ಅಧಿಕಾರಿಗಳಿಗೆ ಲಂಚ ಕೊಡಬೇಕೆಂಬ ದೂರು ಸಾಕಷ್ಟಿವೆ. ಇನ್ನು ಫಲಾನುಭವಿಗಳು ಸಕಾಲಕ್ಕೆ ಬಾರದ ಪಿಂಚಣಿಗಾಗಿ ತಾಲೂಕು ಕಚೇರಿಗಳಿಗೆ ಅಲೆದಾಡಬೇಕಿದೆ.

ಚರಂಡಿ ಸಮಸ್ಯೆ
ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಇದ್ದರೂ ನಿರ್ವಹಣೆ ಇಲ್ಲ. ಕಸ ವಿಲೇವಾರಿ ಸಮಸ್ಯೆ ನೀಗಿಲ್ಲ. ಎಲ್ಲೆಂದರಲ್ಲಿ ಕಸದರಾಶಿ ಹರಡುತ್ತಿದೆ. ಚರಂಡಿ ನೀರು ರಸ್ತೆ ಮೇಲೆಲ್ಲ ಹರಡಿ ರೋಗ ಉತ್ಪತ್ತಿ ತಾಣಗಳಾಗಿವೆ. ಜನ ಸಾಂಕ್ರಾಮಿಕ ಕಾಯಿಲೆ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಕೆರೆ-ಹಳ್ಳ ಸಂರಕ್ಷಣೆ
ಗ್ರಾಮದಲ್ಲಿ 100 ಹೆಕ್ಟೇರ್ ಪ್ರದೇಶದಲ್ಲಿ ಕೆರೆ ನಿರ್ಮಿಸಲಾಗಿದೆ. ಸುತ್ತಲಿನ ಗ್ರಾಮಗಳಿಗೆ ಇದರಿಂದ ಸಾಕಷ್ಟು ಅನುಕೂಲವಿದೆ. ಆದರೆ, ಕೆರೆಯಲ್ಲಿ ಹೂಳು ತುಂಬಿಕೊಂಡಿದೆ. ಕೆರೆ ಒಡ್ಡು ಬಿರುಕು ಬಿಟ್ಟಿದೆ. ಹೀಗಾಗಿ ಕಾಂಕ್ರಿಟ್ ಗೋಡೆ ನಿರ್ಮಿಸಬೇಕಿದೆ. ಕೆರೆ ನೀರಿನಲ್ಲಿ ಈಜಾಡುವುದರಿಂದ, ಬಟ್ಟೆ ತೊಳೆಯುವುದರಿಂದ ಮತ್ತು ದನಕರುಗಳಿಗೆ ಸ್ನಾನ ಮಾಡಿಸುವುದರಿಂದ ನೀರು ಕಲುಷಿತಗೊಳ್ಳುತ್ತಿದೆ. ಇದನ್ನು ತಡೆಯಬೇಕಿದೆ.

ಅರಣ್ಯ-ಗೋಮಾಳ ಭೂಮಿ ಸಂರಕ್ಷಣೆ
ಅರಣ್ಯ ಭೂಮಿ ಮತ್ತು ಗೋಮಾಳಗಳ ಸಮೀಕ್ಷೆ ಮಾಡಿ ಅವುಗಳನ್ನು ಒತ್ತುವರಿಯಾಗದಂತೆ ತಡೆಯಬೇಕಿದೆ. ಜಾಗೆ ಸುತ್ತಲೂ ತಂತಿ ಬೇಲಿ ಹಾಕಬೇಕಿದೆ. ಸರ್ಕಾರಿ ಜಮೀನಿನಲ್ಲಿ ಸಾಕಷ್ಟು ಗಿಡಗಳನ್ನು ನೆಡಲಾಗಿದ್ದು, ಅವುಗಳಿಗೆ ತಂತಿ ಬೇಲಿ ಹಾಕಿ ಸಂರಕ್ಷಿಸಬೇಕಿದೆ.

ಹಳ್ಳದ ಸೇತುವೆ ಎತ್ತರಿಸುವುದು
ಬೊಮ್ಮನಜೋಗಿಯಿಂದ ಕೊಕಟನೂರ ಹಾಗೂ ಶಾಂತಿ ನಗರ, ಇಬ್ರಾಹಿಂಪುರ- ಜಾಲವಾದವರೆಗೆ ಸುವ್ಯವಸ್ಥಿತ ರಸ್ತೆ ಸಂಪರ್ಕವಿದೆ. ಸಾಕಷ್ಟು ವಾಹನಗಳು ಓಡಾಡುತ್ತವೆ. ಈ ಮಾರ್ಗ ಮಧ್ಯೆ ಹಳ್ಳಕ್ಕೆ ಸಣ್ಣ ಸೇತುವೆ ಇದೆ. ಆದರೆ, ಸದರಿ ಸೇತುವೆ ಮಳೆ ಬಂದರೆ ಮುಳುಗುತ್ತದೆ. ಇದರಿಂದ ಗ್ರಾಮ ಸಂಪರ್ಕಕ್ಕೆ ಹೊಡೆತ ಬೀಳಲಿದೆ. ಸದರಿ ಸೇತುವೆಯನ್ನು ಎತ್ತರಿಸಬೇಕಿದೆ.

ಬೊಮ್ಮನಜೋಗಿ ಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಬರುತ್ತಿರುವುದು ನಿರೀಕ್ಷೆ ಹೆಚ್ಚಿಸಿದೆ. ಅವರ ವಾಸ್ತವ್ಯದ ಮೂಲಕವಾದರೂ ಇಲ್ಲಿನ ಸಮಸ್ಯೆ ನೀಗಲಿ ಎಂಬುದೇ ನಮ್ಮ ಆಶಯ.
ವಿಠ್ಠಲ ಯಂಕಂಚಿ, ಬೊಮ್ಮನಜೋಗಿ ನಿವಾಸಿ

ಜಿಲ್ಲಾಧಿಕಾರಿ ಬರುತ್ತಾರೆಂಬ ಸುದ್ದಿ ಕೇಳಿ ತಾಲೂಕು ಅಧಿಕಾರಿಗಳೆಲ್ಲ ಎಚ್ಚೆತ್ತುಕೊಂಡಿದ್ದಾರೆ. ಸಮಸ್ಯೆ ಹೇಳಿಕೊಂಡು ಹೋದರೆ ಕ್ಯಾರೆ ಎನ್ನದವರು ಈಗ ಓಡೋಡಿ ಬಂದು ಕೆಲಸ ಮಾಡುತ್ತಿದ್ದಾರೆ. ಎಂದೂ ಬಾರದ ಸ್ಥಳೀಯ ಅಧಿಕಾರಿಗಳು ಈಗ ಗ್ರಾಮದಲ್ಲಿ ಠಿಕಾಣಿ ಹೂಡಿದ್ದಾರೆ. ಈ ಜವಾಬ್ದಾರಿ ಸದಾ ಇರಬೇಕೆಂಬುದೇ ನಮ್ಮ ಆಶಯ.
ರೇವಣಸಿದ್ದ ನಂದಗೇರಿ, ಬೊಮ್ಮನಜೋಗಿ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net