ದೇವರಗುಡ್ಡದಲ್ಲಿ ಸರಗಳ್ಳರ ಹಾವಳಿ; ಒಂದೇ ದಿನ ಎರಡು ಪ್ರಕರಣ ವರದಿ

Chain snatching Photo
Published on

ರಾಣೆಬೆನ್ನೂರ: ತಾಲೂಕಿನ ದೇವರಗುಡ್ಡದ ಶ್ರೀ ಮಾಲತೇಶ ದೇವಸ್ಥಾನದ ಬಳಿ ಹುಣ್ಣಿಮೆ ಸಂದರ್ಭದಲ್ಲಿ (ಫೆ.7ರಂದು) ದೇವರ ದರ್ಶನಕ್ಕೆ ಬಂದಿದ್ದ ಇಬ್ಬರು ಮಹಿಳೆಯರ ಸರಗಳ್ಳತನ ಆಗಿರುವ ಕುರಿತು ರಾಣೆಬೆನ್ನೂರ ಗ್ರಾಮೀಣ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಎರಡೂ ಪ್ರಕರಣಗಳು ಸುಮಾರು 11 ಗಂಟೆಯಿಂದ 1 ಗಂಟೆಯ ನಡುವಿನ ಅವಧಿಯಲ್ಲಿ ನಡೆದಿವೆ. ಹಾಗಾಗಿ, ಒಂದೇ ತಂಡದ ಕೃತ್ಯ ಎಂದು ಶಂಕಿಸಲಾಗಿದೆ. ಪ್ರಸಿದ್ಧ ಮಾಲತೇಶ ದೇವರ ದರ್ಶನಕ್ಕೆಂದು ಅಮಾವಾಸ್ಯೆ ಹಾಗೂ ಹುಣ್ಣಿಮೆಯಂದು ದೇವರಗುಡ್ಡಕ್ಕೆ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಈ ಸಂದರ್ಭದಲ್ಲೂ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಪೊಲೀಸರು ಸೂಕ್ತ ಭದ್ರತೆ ಕೈಗೊಳ್ಳಬೇಕು. ಕಳ್ಳರ ಹೆಡೆಮುರಿ ಕಟ್ಟಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದೆ.
ಪ್ರಕರಣ 1: ದಾವಣಗೆರೆಯ ನಿಟವಳ್ಳಿ ನಿವಾಸಿ ಅಂಜಲಿ ಚೇತನ ಎಂ. ಎಂಬುವರು ಫೆ.7ರಂದು ಪತಿ ಜತೆಗೆ ದೇವರಗುಡ್ಡದ ಮಾಲತೇಶ ದೇವರ ದರ್ಶನಕ್ಕೆ ಆಗಮಿಸಿದ್ದರು. ಗಂಗಮಾಳಮ್ಮ ದೇವಸ್ಥಾನದ ಆವರಣದಲ್ಲಿ ನಿಂತಿದ್ದಾಗ ಇಲ್ಲಿ ಜನ ಹೆಚ್ಚಾಗಿದ್ದರಿಂದ ತಳ್ಳಾಟ, ನೂಕಾಟ ಸೃಷ್ಟಿಯಾಗಿತ್ತು. ಈ ವೇಳೆ ಕಳ್ಳರು ಕೊರಳಲ್ಲಿದ್ದ 14 ಗ್ರಾಂ ತೂಕದ 64 ಸಾವಿರ ರೂ. ಮೌಲ್ಯದ ಮಾಂಗಲ್ಯ ಸರ ಕದ್ದಿದ್ದಾರೆ.
ಪ್ರಕರಣ 2: ದೇವರಗುಡ್ಡದ ಸಿಬಾರ ಗೋಪುರದ ಹತ್ತಿರ ಹಾವೇರಿ ತಾಲೂಕು ಅಗಡಿ ಗ್ರಾಮದ ಶೈಲಜಾ ಬಹದ್ದೂರ ದೇಸಾಯಿ ಎಂಬುವರು ಫೆ.7ರಂದು ತೆರಳಿದ್ದರು. ಈ ವೇಳೆ ಸರಗಳ್ಳರು ಅವರ ಕೊರಳಲ್ಲಿದ್ದ 2 ಲಕ್ಷ ರೂ. ಮೌಲ್ಯದ 4 ತೊಲದ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net