

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವಕ್ಕೆ ಆಧ್ಯಾತ್ಮಿಕ ಜ್ಞಾನವನ್ನು ನೀಡಿದ ರಾಷ್ಟç ಭಾರತ ಎಂದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ ಹೇಳಿದರು.
ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತದಿಂದ ಬುಧವಾರ ಆಯೋಜಿಸಿದ್ದ ಆದ್ಯ ವಚನಕಾರ ದೇವರ ದಾಸೀಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಾಸೀಮಯ್ಯನವರ ವಚನಗಳು ಪ್ರತಿ ಮನೆಗೆ ತಲುಪುವ ವ್ಯವಸ್ಥೆ ಆಗಬೇಕು. ಅವರನ್ನು ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಬಾರದು ಎಂದರು.
ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಡಾ. ಕೆ.ಜಿ. ಬ್ಯಾಕೋಡಿ ಮಾತನಾಡಿ, ಬಸವಣ್ಣವರು ಅತ್ಯಂತ ಸರಳ ಭಾಷೆಯಲ್ಲಿ ವಚನಗಳನ್ನು ಬರೆದಿದ್ದಾರೆ. ಆದರೆ, ದಾಸೀಮಯ್ಯನವರ ವಚನಗಳು ಕನ್ನಡ, ಹಳಗನ್ನಡ ಬಗ್ಗೆ ಜ್ಞಾನವಿದ್ದರೆ ಮಾತ್ರ ತಿಳಿಯುತ್ತವೆ. ಅವರ ವಚನಗಳಿಗೆ ಅಷ್ಟು ಶಕ್ತಿ ಇದೆ ಎಂದರು.
ರಾಣೆಬೆನೂರು ಪ್ರೌಢಶಾಲಾ ನಿವೃತ್ತ ಶಿಕ್ಷಕ ಎಸ್.ಕೆ. ದುರ್ಗದಸೀಮಿ ಅವರು ದಾಸೀಮಯ್ಯನವರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈರಣ್ಣ ಇಂಜಿನಗೇರಿ ನಿರೂಪಿಸಿದರು. ರವಿ ಡೊಳ್ಳಿ ವಂದಿಸಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಅಜಿತ ದೇಸಾಯಿ, ದೇವಾಂಗ ಸಂಘದ ಅಧ್ಯಕ್ಷ ವಿನೋದ ಹುಲಿಮನಿ, ಸಂಘಟನಾ ಕಾರ್ಯದರ್ಶಿ ರವೀಂದ್ರ ಪಾಟೀಲ, ದೇವಾಂಗ ನೇಕಾರ ಅಭಿವೃದ್ಧಿ ಸಂಘದ ಅಧ್ಯಕ್ಷ ರವಿ ಲೋಲೆ, ಜಗದೀಶ ಜವಳಿ, ಬಸವರಾಜ ಕೊಂಗಿ, ಬಸವರಾಜ ಕುಸುಬಿ, ರಾಮು ತಾರೆನ್ನವರ, ಇತರರಿದ್ದರು.
ಸಮುದಾಯದ ಹಿರಿಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.