

ಮಂಡ್ಯ: ಕಾಯಕದಲ್ಲೇ ದೇವರನ್ನು ಕಂಡವರು ವಚನಕಾರ ದೇವರ ದಾಸಿಮಯ್ಯ ಎಂದು ಸಂಪನ್ಮೂಲ ವ್ಯಕ್ತಿ ಡಾ.ಕೆ.ಎಸ್.ಅನಿತಾ ಬಣ್ಣಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದ ಅವರು, ಒಮ್ಮೆ ಶಿವ ಇವರ ಕಾಯಕಕ್ಕೆ ಒಲಿದು ಅಕ್ಷಯ ಪಾತ್ರೆಯನ್ನು ದೇವರ ದಾಸಿಮಯ್ಯ ಅವರಿಗೆ ನೀಡುತ್ತಾರೆ. ಲೋಕ ಕಲ್ಯಾಣಕ್ಕಾಗಿ ಸಮಾಜದ ಅಭಿವೃದ್ಧಿಗಾಗಿ ಈ ಅಕ್ಷಯ ಪಾತ್ರೆಯನ್ನು ದೇವರ ದಾಸಿಮಯ್ಯ ಬಳಸುತ್ತಾರೆ. ಅದರಿಂದಲೇ ಅವರಿಗೆ ದೇವರ ದಾಸಿಮಯ್ಯ ಎಂಬ ಹೆಸರು ಬಂದಿತು ಎಂದು ಹೇಳಿದರು.
ತಮಗೆ ಸಿಕ್ಕ ಅವಕಾಶವನ್ನು ಯಾರು ಸಮಾಜದ ಅಭಿವೃದ್ಧಿಗಾಗಿ ಶ್ರಮವಹಿಸುತ್ತರೋ ಅವರು ಎಂದಿಗೂ ಸಮಾಜದ ನೆನಪಿನಲ್ಲಿ ಉಳಿಯುತ್ತಾರೆ. ಅದಕ್ಕೆ ನಿದರ್ಶನ ದೇವರ ದಾಸಿಮಯ್ಯ. ಬಂಡವಾಳಶಾಹಿಗಳ ವಿರುದ್ಧ ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ತಮ್ಮ ವಚನಗಳ ಮೂಲಕ ಧ್ವನಿ ಎತ್ತಿದವರು. ಭಾರತೀಯ ಸಂವಿಧಾನದ ಆಶಯಗಳಿಗೆ ಪೂರಕವಾದ ತತ್ವಗಳನ್ನು ದೇವರ ದಾಸಿಮಯ್ಯ ಹೊಂದಿದ್ದರು. ಮಹಿಳೆಯರಿಗೆ ಸಮಾನ ಗೌರವ ಹಾಗೂ ಅವಕಾಶ ನೀಡಬೇಕು. ಲಿಂಗತ್ವ ಅಸಮಾನತೆಯ ವಿರುದ್ಧ ಕಿಡಿಕಾರಿದ್ದರು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ಡಾ.ರೋಹಿಣಿ ಮಾತನಾಡಿ, ದೇವರ ದಾಸಿಮಯ್ಯ ಅವರ ತತ್ವಗಳು ಹಾಗೂ ಸಂದೇಶಗಳು ಇಂದಿನ ಯುವ ಪೀಳಿಗೆ ಆದರ್ಶವಾಗಬೇಕು. ಸಮಾಜ ಸುಧಾರಣೆಯಲ್ಲಿ ಅವರ ಪಾತ್ರ ಅಪಾರ ಎಂದು ಹೇಳಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ವೈಯಕ್ತಿಕ ಅಭಿವೃದ್ಧಿಗಾಗಿ ಶ್ರಮಿಸುವವರು ಕೇವಲ ಅವರ ಮನೆಗಳಲ್ಲೆ ಉಳಿದುಕೊಳ್ಳುತ್ತಾರೆ. ಸಮಾಜ ಏಳಿಗೆಗಾಗಿ ಶ್ರಮಿಸುವವರು ಮಾದರಿ ವ್ಯಕ್ತಿಗಳಾಗಿ ಜನಮಾನಸದಲ್ಲಿ ಅಚ್ಚಳಿಯದ ನೆನಪಾಗಿ ಉಳಿಯುತ್ತಾರೆ. ಶರಣರು, ಸಂತರು, ಮಹಾನೀಯರ ಎಲ್ಲರೂ ಸಹ ಸಮಾಜದ ಏಳಿಗೆಗಾಗಿ ಶ್ರಮಿಸಿದವರು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ವಿ. ಧರಣೇಂದ್ರಯ್ಯ, ಎನ್.ಡಿ.ಹರಿಪ್ರಸಾದ್ ಇತರರಿದ್ದರು.