

ಉಡುಪಿ: ಪ್ರತಿಯೊಬ್ಬರು ಕಾಯಕವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಮಾಡುವ ಮೂಲಕ ಮನಸ್ಸು ಮತ್ತು ಆತ್ಮವನ್ನು ಶುದ್ಧಿ ಮಾಡಿಕೊಳ್ಳಬಹುದು ಎಂಬ ದೇವರ ದಾಸಿಮಯ್ಯ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಹೇಳಿದರು.
ಭಾನುವಾರ ರಜತಾದ್ರಿಯ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ದೇವರ ದಾಸಿಮಯ್ಯ ಜಯಂತಿ ಆಚರಣೆಯಲ್ಲಿ ಮಾತನಾಡಿದರು.
ದೇವರ ದಾಸಿಮಯ್ಯ ಕುರಿತು ಉಪನ್ಯಾಸ ನೀಡಿದ ಗಿರೀಶ್ ಶೆಟ್ಟಿಗಾರ್ ಮಾತನಾಡಿ, ಆದ್ಯ ವಚನಕಾರರೆಂದು ಕರೆಯುವ ದೇವರ ದಾಸಿಮಯ್ಯ ಅವರು, ಸಮಾಜದಲ್ಲಿನ ಮೂಡನಂಬಿಕೆಗಳು ಮತ್ತು ಜನರಲ್ಲಿನ ಅಜ್ಞಾನವನ್ನು ತೊಡೆದುಹಾಕಲು ಪ್ರಯತ್ನಿಸಿದ್ದರು. ವನುಷ್ಯ ಜೀವನದಲ್ಲಿ ಬರುವ ಯಾವುದೇ ಅಡೆ ತಡೆಗಳಿಗೆ ಎದೆಗುಂದದೆ ಶಾಂತಚಿತ್ತದಿಂದ ದೃಡವಾಗಿ ಅವುಗಳನ್ನು ಎದುರಿಸಿದರೆ ಜೀವನ ಸುಗಮವಾಗಲಿದೆ. ಮನಃಶುದ್ಧಿಯಿಂದ ಕಾಯಕವನ್ನು ಮಾಡಿದರೆ ದೇವರು ಒಲಿಯುತ್ತಾನೆ ಎಂದು ತಿಳಿಸಿದ್ದು, ರಾಮನಾಥ ಎಂಬ ಅಂಕಿತನಾಮದಿಂದ ಸುಮಾರು 150 ಕ್ಕೂ ಅಧಿಕ ವಚನಗಳನ್ನು ರಚಿಸಿದ್ದಾರೆ ಎಂದರು.
ತರಬೇತಿ ನಿರತ ಐ.ಎ.ಎಸ್ ಅಧಿಕಾರಿ ಯತೀಶ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಜಿಲ್ಲಾ ಜವಳಿ ಮತ್ತು ಕೈಮಗ್ಗ ಇಲಾಖೆಯ ಸಹಾಯಕ ನಿರ್ದೇಶಕ ಶಿವಶಂಕರ್, ದಕ್ಷಿಣ ಕನ್ನಡ ಪದ್ಮಶಾಲಿ ಸಂಘದ ಅಧ್ಯಕ್ಷ ರಾಮದಾಸ ಶೆಟ್ಟಿಗಾರ್, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಲಕ್ಷ್ಮಣ ಕೊಡಿಯಾಲಬೈಲು, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ನಾಮ ನಿರ್ದೇಶಿತ ಸದಸ್ಯ ಮಾಧವ ಶೆಟ್ಟಿಗಾರ್ ಕೆರೆಕಾಡು, ಉಡುಪಿ ಪ್ರಾಥಮಿಕ ನೇಕಾರರ ಸಹಕಾರ ಸಂಘದ ಅಧ್ಯಕ್ಷ ರತ್ನಾಕರ ಇಂದ್ರಾಳಿ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ನಮ್ಮ ಭೂಮಿಯ ರಾಮಾಂಜಿ ವಂದಿಸಿ, ನಿರೂಪಿಸಿದರು.