ದೇವಾಂಗ ಸಮಾಜದಿಂದ ಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನ

Devanga Samaj, Pratibha Puraskar, Achievement Award, Muddebihala,
ಮುದ್ದೇಬಿಹಾಳ ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಎಂ.ಎಸ್.ಬಡದಾನಿ, ಡಾ.ಐಶ್ವರ್ಯಾ ಗುಡ್ಡದ, ವಿಜಯಲಕ್ಷ್ಮೀ ಪ್ಯಾಟಿಗೌಡರ, ಐಶ್ವರ್ಯಾ ಪ್ಯಾಟಿಗೌಡರ, ಸವಿತಾ ಪ್ಯಾಟಿ, ಕಸ್ತೂರಿ ಗದ್ದೆಪ್ಪನವರ ಅವರನ್ನು ಸನ್ಮಾನಿಸಲಾಯಿತು.
Published on

ಮುದ್ದೇಬಿಹಾಳ: ಬಸವಣ್ಣನವರಿಗಿಂತಲೂ ಮೊದಲು ಆಗಿ ಹೋಗಿರುವ ದೇವರ ದಾಸಿಮಯ್ಯ ಅವರ ವಚನಗಳ ಅರ್ಥ ಸಹಿತ ವಿಶ್ಲೇಷಣೆ ಕುರಿತಾದ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲು ಸಹಕಾರ ನೀಡುವುದಾಗಿ ಬಾಗಲಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ ಹೇಳಿದರು.

ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ನಗರ ದೇವಾಂಗ ಸಮಾಜದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಲು ಮುಂಬರುವ ದಿನಗಳಲ್ಲಿ ಸಮಾಜ ಕಾರ್ಯ ಮಾಡಲಿದೆ. ಹಿಂಜರಿಕೆ ಸ್ವಭಾವದಿಂದ ಸಮಾಜದ ಎದುರಿಗೆ ಪ್ರತಿಭೆ, ಸಾಮರ್ಥ್ಯ ಪ್ರದರ್ಶನಕ್ಕೆ ಹಿಂದೇಟು ಹಾಕುವ ಸ್ವಭಾವ ತೊರೆಯಬೇಕು. ಸಮಾಜದ ಪ್ರತಿಭೆಗಳು ಅಳುಕಿಲ್ಲದೆ ಪ್ರತಿಭೆ ತೋರ್ಪಡಿಸಿ ಸಾಧನೆಯ ಗುರಿ ತಲುಪಬೇಕು ಎಂದು ಹೇಳಿದರು.

ಶಿಕ್ಷಕ ಜಿ.ಟಿ.ಮಂಗಳೂರು ಉಪನ್ಯಾಸ ನೀಡಿ ಮಾತನಾಡಿ, ದೇವರದಾಸಿಮಯ್ಯ ಅವರ ವಚನಗಳ ಕುರಿತು ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ. ಅವರ ವಚನಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು. ಆದರ್ಶಗಳು ಇಂದಿನ ಪೀಳಿಗೆಗೆ ಮಾದರಿಯಾಗಿವೆ ಎಂದರು.
ಸನ್ಮಾನಿತರ ಪರ ಡಾ.ಐಶ್ವರ್ಯಾ ಗುಡ್ಡದ ಮಾತನಾಡಿ, ಸಮಾಜದಿಂದ ಗೌರವ ಸಿಕ್ಕಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಸಾಮಾಜಿಕವಾಗಿ ಇನ್ನಷ್ಟು ಸೇವೆ ಮಾಡುವ ಕಾರ್ಯ ಮಾಡುತ್ತೇನೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ದೇವರದಾಸಿಮಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮುಖಂಡ ಬಸಪ್ಪ ಹೆಬ್ಬಾಳ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಪ್ರಮುಖರಾದ ಚನ್ನಬಸ್ಸು ಗುಡ್ಡದ, ಅಮರೇಶ ಡಂಬಳ, ಸಿದ್ದಣ್ಣ ಚಿತ್ತರಗಿ, ಮುತ್ತಣ್ಣ ಪ್ಯಾಟಿಗೌಡರ, ನಾಗಪ್ಪ ಅಗಸಬಾಳ, ಪತ್ರಕರ್ತ ಶಂಕರ ಹೆಬ್ಬಾಳ, ಯುವ ಘಟಕದ ಅಧ್ಯಕ್ಷ ಶಿವು ಪ್ಯಾಟಿಗೌಡರ, ಬಸಪ್ಪ ಬೇನಾಳ, ಸುರೇಶ ಆಲೂರ ಹಾಗೂ ದೇವಾಂಗ ಸಮಾಜದ ಬಾಂಧವರು ಇದ್ದರು.
ಉಪನ್ಯಾಸಕ ವಿ.ವಿ.ಮಾಶೆಟ್ಟಿ ಸ್ವಾಗತಿಸಿದರು. ಶ್ರೀಶೈಲ ಮುದ್ದೇಬಿಹಾಳ ನಿರೂಪಿಸಿದರು. ಶ್ರೀಶೈಲ ಭಾವಿಕಟ್ಟಿ ವಂದಿಸಿದರು.

ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ
2021-22ನೇ ಶೈಕ್ಷಣಿಕ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಆದರ್ಶ ಮುದ್ದೇಬಿಹಾಳ, ಅನಿಕತೇಜ ಪ್ಯಾಟಿಗೌಡರ, ಪಿಯು ವಿಭಾಗದಲ್ಲಿ ಗಿರಿಧರ ಮಂಗಳೂರು, ಶರಣಬಸವರಾಜ ಡಂಬಳ ಅವರಿಗೆ ಪ್ರತಿಭಾ ಪುರಸ್ಕಾರ, ನಗದು ಬಹುಮಾನ ನೀಡಲಾಯಿತು. ಬಾಗಲಕೋಟೆ ಕ್ಷೇತ್ರಶಿಕ್ಷಣಾಧಿಕಾರಿಯಾಗಿ ನೇಮಕವಾದ ಎಂ.ಎಸ್.ಬಡದಾನಿ, ಉನ್ನತ ವೈದ್ಯಕೀಯ ಶಿಕ್ಷಣದಲ್ಲಿ ಸಾಧನೆ ತೋರಿದ ಡಾ.ಐಶ್ವರ್ಯಾ ಗುಡ್ಡದ, ಪ್ಯಾರಾಮೆಡಿಕಲ್ ಶಿಕ್ಷಣದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಐಶ್ವರ್ಯಾ ಪ್ಯಾಟಿಗೌಡರ, ಕಾಯಕ ರತ್ನ ಪ್ರಶಸ್ತಿ ಪಡೆದ ಶಿಕ್ಷಕಿ ಕಸ್ತೂರಿ ಗದ್ದೆಪ್ಪನವರ, ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಸಾಧನೆ ತೋರಿದ ವಿಜಯಲಕ್ಷ್ಮೀ ಪ್ಯಾಟಿಗೌಡರ, ನಲಿಕಲಿ ವಿಭಾಗದಲ್ಲಿ ರಾಜ್ಯಪ್ರಶಸ್ತಿ ಪಡೆದ ಸವಿತಾ ಪ್ಯಾಟಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net