

ಧಾರವಾಡ: ಮಕ್ಕಳಲ್ಲಿ ವಿಶಿಷ್ಟ ಪ್ರತಿಭೆ ಇರುತ್ತದೆ, ಅದನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು, ಅಂದಾಗ ಮಾತ್ರ ಅವರು ಆಸಕ್ತಿಯಿಂದ ಕಲಿತು ಮುನ್ನಡೆಯುತ್ತಾರೆ. ಇಲ್ಲವಾದರೆ ಅವರಿಗೆ ಕಲಿಕೆ ಮತ್ತು ಶಿಕ್ಷಣ ಒತ್ತಡವಾದಂತಾಗುತ್ತದೆ ಎಂದು ಮೇಯರ್ ವೀಣಾ ಬರದ್ವಾಡ ಹೇಳಿದರು.
ಇಲ್ಲಿಯ ರವೀಂದ್ರ ನಗರದ ದೇವಾಂಗ ವಿದ್ಯಾರ್ಥಿ ನಿಲಯ ಹಾಗೂ ಎನ್.ಆರ್. ಹುಲಮನಿ ಸಭಾಭವನದಲ್ಲಿ ದೇವಾಂಗ ಸಮಾಜದ ವತಿಯಿಂದ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣವು ಮಕ್ಕಳ ಕಲಿಕೆಗೆ ಪ್ರೋತ್ಸಾಹದಾಯಕವಾಗಿರಬೇಕೆ ಹೊರತು ಹೊರೆಯಾಗಬಾರದು ಎಂದು ಸಲಹೆ ನೀಡಿದರು.
ಅತಿಥಿಯಾಗಿದ್ದ ಖ್ಯಾತ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಮಾತನಾಡಿ, ಇತ್ತೀಚಿಗೆ ಪಾಲಕರು ತಮ್ಮ ಮಕ್ಕಳು ಪಡೆಯುವ ಅಂಕಗಳ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಇದಕ್ಕಿಂತ ತಮ್ಮ ಮಕ್ಕಳು ಹೇಗೆ ಕಲಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎನ್ನುವುದರ ಕಡೆ ಗಮನ ಹರಿಸಬೇಕು ಎಂದು ಹೇಳಿದರು.
ದೇವಾಂಗ ಸಮಾಜದ ಅಧ್ಯಕ್ಷ ವಿನೋದ ಹುಲಮನಿ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 75 ವಸಂತಗಳನ್ನು ಪೂರೈಸಿದ ವಿಶ್ವನಾಥ ಹುಲ್ಲೂರ, ಎಸ್.ಕೆ. ಕುಂದರಗಿ, ಬಸವರಾಜ ಗಿಡ್ನಂದಿ, ಶಾಂತಾದೇವಿ ಗಾಡದ, ಯಶೋಧ ಗಿಡ್ನಂದಿ ಇವರನ್ನು ಸನ್ಮಾನಿಸಲಾಯಿತು.
ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಸಂಜನಾ ಕೆರೂರ, ಕಮಲಾ ಕುಡ್ಲನ್ನವರ್, ಕಿಶನ್ ಉಳ್ಳಿ, ಅಪರ್ಣ ಶೇಗಡಿ, ಧನ್ಯ ಅಥಣಿ ಹಾಗೂ ಭಕ್ತೇಶ್ ಹೆಬ್ಬಳ್ಳಿ ಅವರಿಗೆ ಪ್ರೋತ್ಸಾಹ ಧನ ನೀಡಲಾಯಿತು.
ಮಹಿಳಾ ಮಂಡಳದ ವತಿಯಿಂದ ರಂಗೋಲಿ, ಫ್ಯಾನ್ಸಿ ಡ್ರೆಸ್ ಸ್ಪರ್ಧೆ ನಡೆದವು. ವಿಜೇತರಿಗೆ ಬಹುಮಾನ ನೀಡಲಾಯಿತು.
ಸಮಾಜದ ಪ್ರಧಾನ ಕಾರ್ಯದರ್ಶಿ ಜ್ಞಾನೇಶ್ವರ ಚೋಳಿನ್, ಶಕ್ತಿ ಮಹಿಳಾ ಮಂಡಳದ ಅಧ್ಯಕ್ಷೆ ಮಂಜುಳಾ ಬೋರಣ್ಣವರ್ ಉಪಸ್ಥಿತರಿದ್ದರು.
ಡಾ. ಗುರುರಾಜ್ ಗಾಡದ ಸ್ವಾಗತಿಸಿದರು. ಬೋರಣ್ಣವರ ವಂದಿಸಿದರು.