

ವಿಜಯಪುರ: ಚಿಕ್ಕಬಳ್ಳಾಪುರ ರಸ್ತೆಯ ಅಮಾನಿಕೆರೆಗೆ ಟಿಪ್ಪರ್, ಟ್ರಾಕ್ಟರ್‌ಗಳಲ್ಲಿ ತ್ಯಾಜ್ಯ ತಂದು ಸುರಿಯುತ್ತಿರುವುದರಿಂದ ಕೆರೆಯ ಪ್ರದೇಶ ಒತ್ತುವರಿಯಾಗಿ ಮುಂದಿನ ದಿನಗಳಲ್ಲಿ ಕೆರೆ ಕಣ್ಮರೆಯಾಗುವ ಭೀತಿ ಎದುರಾಗಿದೆ.
ಪಟ್ಟಣದ ಮುಖ್ಯರಸ್ತೆಯಲ್ಲಿರುವ ಅಮಾನಿಕೆರೆಗೆ ಎಚ್.ಎನ್. ವ್ಯಾಲಿ ಯೋಜನೆಯಡಿ ನೀರು ಹರಿಯುತ್ತಿದೆ. ಕೆರೆಯನ್ನೂ ಕೂಡ ಎಚ್.ಎನ್. ವ್ಯಾಲಿ ಅಧಿಕಾರಿಗಳು ಅಧೀನಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಟಿಪ್ಪರ್, ಟ್ರ್ಯಾಕ್ಟರ್‌ಗಳಲ್ಲಿ ಹೊತ್ತು ತಂದ ತ್ಯಾಜ್ಯವನ್ನು ಕೆರೆಗೆ ಸುರಿಯುತ್ತಿದ್ದರೂ ಅಧಿಕಾರಿಗಳು ದಿವ್ಯಮೌನ ವಹಿಸಿದ್ದಾರೆ. ದಿನೇ ದಿನೇ ತ್ಯಾಜ್ಯ ಸುರಿಯುವ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಕೆರೆಯ ಪರಿಸರ ಹಾಳಾಗುತ್ತಿದ್ದು ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಜಲಚರಗಳಿಗೆ ತೊಂದರೆಯಾಗುತ್ತಿದೆ.
ಇಷ್ಟು ವರ್ಷ ಕೆರೆಯಲ್ಲಿ ನೀರಿರಲಿಲ್ಲ. ಆದ್ದರಿಂದ ಪುರಸಭೆಯವರು ಕುಡಿಯುವ ನೀರಿಗಾಗಿ ಕೊಳವೆಬಾವಿಗಳನ್ನು ಕೆರೆಯಲ್ಲಿ ಕೊರೆಸಿದ್ದಾರೆ. ಈಗ ಕೆರೆಗೆ ಎಚ್.ಎನ್.ವ್ಯಾಲಿ ಯೋಜನೆಯಡಿ ನೀರು ಹರಿಯುತ್ತಿದೆ. ಜತೆಗೆ ಪಟ್ಟಣದ ಕಸವನ್ನು ಕೆರೆಗೆ ತಂದು ಸುರಿಯುತ್ತಿದ್ದಾರೆ.
ಕೆರೆಗೆ ಪ್ಲಾಸ್ಟಿಕ್ ತ್ಯಾಜ್ಯ ತಂದು ಸುರಿಯುತ್ತಿದ್ದರೂ ಯಾರು ಕೇಳುವವರಿಲ್ಲದಂತಾಗಿದೆ. ಸ್ಥಳೀಯವಾಗಿ ಪರಿಸರವು ಹಾಳಾಗುವುದರ ಜತೆಗೆ ಕೆರೆಯ ನೀರು ಕಲುಷಿತವಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಒತ್ತುವರಿಯಾಗುತ್ತಿರುವ ಕೆರೆಯನ್ನು ಸಂರಕ್ಷಿಸಬೇಕು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಹಡಪದ್ ಕಳವಳ ಒತ್ತಾಯಿಸಿದ್ದಾರೆ.
ಕೆರೆಗೆ ನೀರು ತುಂಬಿಸುವ ಮುಂಚೆ ಹೂಳು ತೆಗೆದಿದ್ದೆವು. ಈಗ ಕೆರೆಗೆ ನೀರು ಹರಿಯುತ್ತಿದೆ. ಒತ್ತುವರಿ ತೆರವು ಮಾಡಿದ ಬಳಿಕ ನಮಗೆ ಹಸ್ತಾಂತರಿಸುವಂತೆ ಕಂದಾಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಅವರು ಸರ್ವೇ ಮಾಡಿದ ಬಳಿಕವೇ ಹೂಳು ತೆಗೆದು ನೀರು ತುಂಬಿಸುವ ಪ್ರಯತ್ನ ಮಾಡಿದ್ದೇವೆ. ಆದರೆ, ಸ್ಥಳೀಯ ಗ್ರಾಮಲೆಕ್ಕಾಧಿಕಾರಿಗಳು ಸ್ಪಂದಿಸುತ್ತಿಲ್ಲ. ಒಂದು ವೇಳೆ ಕೆರೆಗೆ ಮಣ್ಣು ತುಂಬಿಸಿ ಒತ್ತುವರಿ ಮಾಡುತ್ತಿದ್ದರೆ, ಮತ್ತೊಮ್ಮೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ನೊಟೀಸ್ ಜಾರಿಗೊಳಿಸಲಾಗುವುದು.
| ಜ್ಯೋತಿ ಪಾಟೀಲ್ ಸಹಾಯಕ ಇಂಜಿನಿಯರ್, ಎಚ್.ಎನ್.ವ್ಯಾಲಿ ಯೋಜನೆ, ದೇವನಹಳ್ಳಿ
ಕೆರೆಗೆ ತ್ಯಾಜ್ಯ ಸುರಿಯುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಸ್ಥಳೀಯ ನಾಗರಿಕರು ಕೂಡ ಕೆರೆಗೆ ತ್ಯಾಜ್ಯ ಸುರಿಯುವವರನ್ನು ತಡೆಯಬೇಕು. ಇಲಾಖೆ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲಿಸಲಾಗುವುದು.
| ಶಿವರಾಜ್ ತಹಸೀಲ್ದಾರ್