

ಚನ್ನರಾಯಪಟ್ಟಣ: ಬರದಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿ ಸಂಕಷ್ಟಕ್ಕೆ ಸಿಲುಕಿದ್ದ ಬಡ ಕುಟುಂಬಗಳಿಗೆ ಉದ್ಯೋಗ ಖಾತ್ರಿ ಯೋಜನೆ ಸಂಜೀವಿನಿಯಾಗಿದೆ. ಇದರ ಪರಿಣಾಮ ದೇವನಹಳ್ಳಿ ತಾಲೂಕು ಪಂಚಾಯತ್ ನರೇಗಾ ಪ್ರಗತಿಯಲ್ಲಿ ಶೇ.99 ಸಾಧನೆ ಮಾಡುವ ಮೂಲಕ ಜಿಲ್ಲೆಯಲ್ಲೇ ಗರಿಷ್ಠ ಮಾನವ ದಿನಗಳ ಉದ್ಯೋಗ ಸೃಷ್ಟಿ ಮಾಡಿದೆ.
ನರೇಗಾ ಪ್ರಗತಿಯಲ್ಲಿ ಕಳೆದ ವರ್ಷ ಜಿಲ್ಲೆ ಶೇ.100 ಸಾಧನೆ ಮಾಡಿತ್ತು. ಅಂತೆಯೇ, ಈ ಬಾರಿ ದೇವನಹಳ್ಳಿ ತಾಪಂ ಪ್ರಗತಿಯಲ್ಲಿ ಶೇ.99 ಸಾಧನೆ ಮಾಡಿದೆ.
ಯೋಜನೆಯ ಯಶಸ್ಸಿಗಾಗಿ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ ಅಭಿಯಾನದ ಮೂಲಕ ಪ್ರತಿ ಗ್ರಾಪಂನಲ್ಲಿ ಅರಿವು ಮೂಡಿಸುವ ಮೂಲಕ 2023ರ ಅ.18ರ ಅಂತ್ಯಕ್ಕೆ ಶೇ.99 ಗುರಿ ಸಾಧಿಸುವಲ್ಲಿ ದೇವನಹಳ್ಳಿ ತಾಲೂಕು ಪಂಚಾಯಿತಿ ಮೊದಲ ಸ್ಥಾನ ಕಾಯ್ದುಕೊಂಡಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಚೀಟಿ ಹೊಂದಿರುವ ಕುಟುಂಬಗಳಿಗೆ ವರ್ಷದಲ್ಲಿ 100 ದಿನ ಕೆಲಸ ಒದಗಿಸುವ ಗುರಿ ಇದ್ದು ಅಧಿಕಾರಿಗಳ ಶ್ರಮದಿಂದ ಈ ಕಾರ್ಯ ಸಾಧ್ಯವಾಗಿದೆ. ಉದ್ಯೋಗ ನೀಡುವ ಜತೆಗೆ ದೀರ್ಘ ಬಾಳಿಕೆ ಬರುವ ಕೆಲಸಗಳಿಗೆ ಆದ್ಯತೆ ನೀಡಿರುವುದು ವಿಶೇಷ.
ವಿವಿಧ ಕಾಮಗಾರಿ: ಈ ಬಾರಿ ಜಿಲ್ಲೆಯ ಗ್ರಾಪಂಗಳಿಗೆ ಸೂಕ್ತ ಮಾಹಿತಿ ಹಂಚಿಕೆ ಮಾಡಿದ್ದು, ಸಮಗ್ರ ಅಭಿವೃದ್ಧಿ, ಬದು ನಿರ್ಮಾಣ, ಕಲ್ಯಾಣಿ ಅಭಿವೃದ್ಧಿ, ನಮ್ಮ ಹೊಲ-ನಮ್ಮದಾರಿ, ಮಳೆ ನೀರು ಕೊಯ್ಲು, ಶಾಲಾಭಿವೃದ್ಧಿ, ಇತರ ಸಮುದಾಯ ಚಟುವಟಿಕೆಗಳನ್ನು ಮಾಡಲು ತಾಪಂ ಇಒ ಮೂಲಕ ಪಿಡಿಒಗಳಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡಲಾಗಿದ್ದು ಯೋಜನೆಯ ಯಶಸ್ಸಿಗೆ ಮುಖ್ಯ ಕಾರಣವಾಗಿದೆ.
ಶೇ.100 ಪ್ರಗತಿ: ನರೇಗಾ ಅನುಷ್ಠಾನದಲ್ಲಿ ತಾಪಂ ಜತೆಗೆ ಅರಣ್ಯ, ರೇಷ್ಮೆ, ತೋಟಗಾರಿಕೆ, ಕೃಷಿ ಇಲಾಖೆ ಸಹಭಾಗಿತ್ವದಲ್ಲಿ ಮಹಿಳಾ ಕಾಯಕೋತ್ಸವದಡಿ ಮಹಿಳೆಯರಿಗೆ ಶೇ.100 ಜಾಬ್ ಕಾರ್ಡ್ ವಿತರಿಸಿ, ಸ್ವಂತ ಜಮೀನಿನಲ್ಲಿ ವಿವಿಧ ಕಾಮಗಾರಿ ಮಾಡಿಕೊಳ್ಳಲು ಒತ್ತು ನೀಡಲಾಗಿತ್ತು. ಹಳ್ಳಿಗಳಲ್ಲಿ ಉದ್ಯೋಗ ಸೃಜಿಸುವ ನಿಟ್ಟಿನಲ್ಲಿ ಜಾಬ್ ಕಾರ್ಡ್‌ಗಳನ್ನು ತ್ವರಿತವಾಗಿ ಮತ್ತು ಕಡ್ಡಾಯವಾಗಿ ಮಾಡಿಕೊಡಲು ಕ್ರಮ ಕೈಗೊಳ್ಳಲಾಗಿತ್ತು. ನರೇಗಾ ಯೋಜನೆಯಡಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಿದ್ದರಿಂದ ದೇವನಹಳ್ಳಿ ತಾಪಂ ಯಶಸ್ವಿಯಾಗಿದೆ. ಸಂಪನ್ಮೂಲ ಲಭ್ಯವಿರುವ ಗ್ರಾಪಂಗಳಲ್ಲಿ ಹೆಚ್ಚು ಕಾಮಗಾರಿಗೆ ಪ್ರೋತ್ಸಾಹಿಸಿದ ಪರಿಣಾಮ ಈ ಸಾಧನೆ ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.