

ದೇವನಹಳ್ಳಿ : ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ 1,151 ದಿನ ಪೂರೈಸಿದ್ದು, ಜೂ.25ರಂದು ದೇವನಹಳ್ಳಿ ಚಲೋಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಗಳ ಒಕ್ಕೂಟದೊಂದಿಗೆ ದೇವನಹಳ್ಳಿಯ ಪ್ರವಾಸಿ ಮಂದಿರದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ರೈತ, ಕಾರ್ಮಿಕ, ದಲಿತ ಸಂಘಟನೆಗಳ ಸಭೆ ನಡೆಸಿ ದೇವನಹಳ್ಳಿ ಚಲೋ ನಿರ್ಣಯ ಕೈಗೊಳ್ಳಲಾಗಿದೆ.
ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಸರ್ಕಾರಕ್ಕೆ ಭೂಮಿ ಬರೀ ಮಾರಾಟದ ವಸ್ತುವಷ್ಟೇ. ಆದರೆ ರೈತರಿಗೆ ಇದೇ ಬದುಕು.
ಆದ್ದರಿಂದ ಯಾವುದೇ ಕಾರಣಕ್ಕೂ ನಾವು ಭೂಮಿ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ರೈತರು ಐತಿಹಾಸಿಕ ಹೋರಾಟ ನಡೆಸುತ್ತಿದ್ದು, ಇದು ದೇವನಹಳ್ಳಿ ಹೋರಾಟ ಮಾತ್ರವಲ್ಲ, ಇಡೀ ರಾಜ್ಯದ ಹೋರಾಟ ಎಂದರು.
ರೈತ ಸಂಘಟನೆಗಳು ಮತ್ತು ಎಲ್ಲ ಪ್ರಗತಿಪರ ಸಂಘಟನೆಗಳು ಈ ಹೋರಾಟವನ್ನು ಪ್ರತಿಷ್ಠೆಯಾಗಿ ಪರಿಗಣಿಸಿ, ಜೂ.25ಕ್ಕೆ ದೇವನಹಳ್ಳಿ ಚಲೋ ಹೆಸರಿನಲ್ಲಿ ಎಲ್ಲ ಜಿಲ್ಲೆಗಳಿಂದ ಹೋರಾಟಗಾರರು, ಬೆಂಬಲಿಗರು ಸೇರಿ ಪ್ರತಿರೋಧ ವ್ಯಕ್ತಪಡಿಸೋಣ. ಇದು 10 ಸಾವಿರ ಜನರನ್ನು ಒಳಗೊಂಡ ಬೃಹತ್ ಕಾರ್ಯಕ್ರಮವಾಗಬೇಕು. ಇದಕ್ಕಾಗಿ ಸಂಯುಕ್ತ ಹೋರಾಟ ಕರ್ನಾಟಕದ ಎಲ್ಲ ಸಹಭಾಗಿ ಸಂಘಟನೆಗಳು ರಾಜ್ಯದ ವಿವಿಧ ಭಾಗಗಳಿಂದ ಕಾರ್ಯಕರ್ತರನ್ನು ಕರೆತರಲಿವೆ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ಯಶವಂತ್ ಮಾತನಾಡಿ, ಸರ್ಕಾರ ಬಂಡವಾಳಶಾಹಿಗಳ ಪರವೇ ಹೊರತು ಎಂದಿಗೂ ರೈತರ ಪರವಾಗಿಲ್ಲ. ಇದಕ್ಕೆ ಯಾವ ಪಕ್ಷದ ಸರ್ಕಾರವೂ ಹೊರತಾಗಿಲ್ಲ. ಕಾರ್ಪೊರೇಟ್ ಪರ ಸರ್ಕಾರವನ್ನು ನಾವು ಹಿಮ್ಮೆಟ್ಟಿಸಲೇಬೇಕು ಎಂದರು. ಭೂಮಿ ಮತ್ತು ವಸತಿ ಹೋರಾಟ ಸಮಿತಿ ಮರಿಯಪ್ಪ, ಹೋರಾಟಗಾರರಾದ ಕಾರಳ್ಳಿ ಶ್ರೀನಿವಾಸ್, ಪ್ರಭಾ ಬೆಳವಂಗಲ, ನವೀನ್, ಚಂದ್ರ ತೇಜಸ್ವಿ, ರಮೇಶ್ ಸಂಕ್ರಾಂತಿ ಸೇರಿ ವಿವಿಧ ಸಂಘಟನೆ ಮುಖಂಡರು, ರೈತ ನಾಯಕರು ಮತ್ತು 13 ಹಳ್ಳಿಗಳ ರೈತರು ಇದ್ದರು.
ನಿರ್ಣಾಯಕ ಹೋರಾಟ
ಜೂ.25ರಂದು ದೇವನಹಳ್ಳಿ ಚಲೋ ನಿರ್ಣಾಯಕ ಹೋರಾಟವಾಗಲಿದೆ. ಯಾವುದೇ ಕಾರಣಕ್ಕೂ ಬರಿಗೈಯಲ್ಲಿ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ. ಅದಕ್ಕೆ ರೈತರು ದನ, ಕರು, ಕುರಿಗಳ ಜತೆ ಬಂದು ಸೇರಿಕೊಳ್ಳೋಣ. ಅದನ್ನು ಮೀರಿ ಅದು ಹೇಗೆ ಭೂಸ್ವಾಧೀನ ಮಾಡುತ್ತಾರೋ ನೋಡೋಣ. ತಾಕತ್ತಿದ್ದರೆ ಒಂದಿಂಚು ಭೂಮಿ ಸ್ವಾಧೀನ ಮಾಡಿಕೊಳ್ಳಲಿ. ಇದು ಸರ್ಕಾರಕ್ಕೆ ಹೋರಾಟಗಾರರ ಸವಾಲು ಎಂದು ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ಶ್ರೀಧರ್ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಸರ್ಕಾರದ ಮೇಲಿಟ್ಟಿದ್ದ ನಂಬಿಕೆ ಇದೀಗ ಸಂಪೂರ್ಣ ಹುಸಿಯಾಗಿದೆ. ವಿರೋಧ ಪಕ್ಷದಲ್ಲಿದ್ದಾಗ ರೈತರ, ಬಡವರ ಪರವಾಗಿ ನಿಲ್ಲುವುದಾಗಿ ಹೇಳಿ ಜನರನ್ನು ನಂಬಿಸಿ ಅಧಿಕಾರಕ್ಕೆ ಬಂದು, ಇದೀಗ ವಚನ ಭ್ರಷ್ಟರಾಗಿದ್ದಾರೆ. ಆದ್ದರಿಂದ, ಎಲ್ಲ ಸಂಘಟನೆಗಳು ಚನ್ನರಾಯಪಟ್ಟಣ ರೈತರ ಜತೆ ನಿಂತು ಅವರನ್ನು ಗೆಲ್ಲಿಸಲೇಬೇಕು. - ಮಾವಳ್ಳಿ ಶಂಕರ್, ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾವು ಅಭಿವೃದ್ಧಿಯ ವಿರೋಧಿಗಳಲ್ಲ. ಕೃಷಿಗೆ ಯೋಗ್ಯವಲ್ಲದ ಬರಡು ಭೂಮಿ ಮತ್ತು ಅತಿಯಾದ ನೀರಾವರಿ ಕಾರಣಕ್ಕೆ ಉಂಟಾಗಿರುವ ಜೌಗು ಭೂಮಿ ಸಾಕಷ್ಟು ಇವೆ. ಅಲ್ಲಿ ಧಾರಾಳವಾಗಿ ಕೈಗಾರಿಕೆ ಸ್ಥಾಪನೆ ಮಾಡಲಿ. ಆದರೆ ಸರ್ಕಾರ ಕೆಐಎಡಿಬಿ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದಾರೆ. - ಚಾಮರಸ ಮಾಲಿ ಪಾಟೀಲ, ರೈತ ಸಂಘದ ಮುಖಂಡ