ಸರ್ವಶಕ್ತಿ ದೇವಿ ಕುಕ್ಲೂರು ಶ್ರೀಮೂಲ ಭದ್ರಕಾಳಿ

1 kukloor Badrakali
Published on

ಪಳೆಯಂಡ ಪಾರ್ಥ ಚಿಣ್ಣಪ್ಪ ವಿರಾಜಪೇಟೆ
ಪಶ್ಚಿಮಾಭಿಮುಖವಾಗಿರುವ ಕುಕ್ಲೂರು ಕುಂದ ಶ್ರೀಮೂಲ ಭದ್ರಕಾಳಿ ಸರ್ವಶಕ್ತಿ ದೇವಿ ಎಂದೇ ಪ್ರಸಿದ್ಧಿ ಪಡೆದಿದೆ. ಈ ದೇವಾಲಯಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ದೇವಾಲಯಕ್ಕೆ ೧,೨೦೦ ವರ್ಷಕ್ಕೂ ಅಧಿಕ ಇತಿಹಾಸ ಇದೆ. ಚಂಬೆಬೆಳ್ಳೂರು ಗ್ರಾಮದ ಚೆಂದಂಡ ಕುಟುಂಬದಲ್ಲಿ ಇಬ್ಬರು ಅಣ್ಣ
ತಮ್ಮಂದಿರಿದ್ದರು. ಅಚಾನಕ್ ಆಗಿ ತಮ್ಮ ಕಾಣೆಯಾಗುತ್ತಾನೆ. ಶಾಸ್ತ್ರ ನೋಡುವಾಗ ಕೇರಳದಲ್ಲಿದ್ದಾನೆಂದು ತಿಳಿದು ಬರುತ್ತದೆ. ಅಲ್ಲಿ ಹೋಗಿ ನೋಡುವಾಗ ಒಬ್ಬರು ಮಾಯಾವಿಯ ದರ್ಶನವಾಗುತ್ತದೆ. ತಮ್ಮನ ವಿಚಾರ ಪ್ರಸ್ತಾಪಿಸಿದಾಗ ತಮ್ಮನನ್ನು ಹುಡುಕಿ ಕೊಡುತ್ತೇನೆ. ನಿಮ್ಮ ಊರಿನಲ್ಲಿ ನನಗೊಂದು ನೆಲೆ ಕೊಡಬೇಕು, ನಾನು ಪಶ್ಚಿಮಾಭಿಮುಖವಾಗಿ ನೆಲೆ ನಿಲ್ಲಬೇಕು ಎಂದು ಹೇಳಿದಾಗ ಒಪ್ಪಿಗೆ ಸೂಚಿಸುತ್ತಾರೆ.

ದೇವಿ ಮತ್ತೊಂದು ಷರತ್ತನ್ನು ಹಾಕುತ್ತಾರೆ. ನನ್ನ ಜತೆ ನನ್ನ ಇಬ್ಬರು ತಂಗಿಯಂದಿರು ಇದ್ದಾರೆ ಅವರನ್ನು ಕರೆದುಕೊಂಡು ಬರುತ್ತೇನೆಂದು ಹೇಳಿದಾಗ ಅದಕ್ಕೂ ಒಪ್ಪಿಗೆ ಸೂಚಿಸುತ್ತಾರೆ. ಚಂಬೆಬೆಳ್ಳಿಯೂರಿನಲ್ಲಿ ಬಂದು ಪಶ್ಚಿಮ ದಿಕ್ಕಿನಲ್ಲಿ ನೆಲೆ ನಿಲ್ಲುತ್ತಾರೆ. ಇಬ್ಬರು ತಂಗಿಯರಿಗೆ ಕುಕ್ಕೂರು ಹಾಗೂ ಕಟ್ಟೆಮಾಡಿನಲ್ಲಿ ನೆಲೆ ನಿಲ್ಲಲು ಆಜ್ಞಾಪಿಸುತ್ತಾರೆಂದು ಹಿರಿಯರು ಹೇಳುತ್ತಾರೆ.

ಮತ್ತೊಂದು ಮೂಲದ ಪ್ರಕಾರ ಹಿಂದೆ ಮಾಳೇಟಿರ ಕುಟುಂಬ ಚೇರಂಬಾಣೆಯ ಬೇಂಗ್‌ನಾಡಿನಿಂದ ಕಕ್ಲೂರಿಗೆ ಬಂದಿದ್ದು, ಗುರು ಹಿರಿಯರು ಭದ್ರಕಾಳಿ ಹಾಗೂ ಚಾಮುಂಡಿ ದೇವರನ್ನು ತಂದು ನೆಲೆ ನಿಲ್ಲಿಸಿದ್ದಾರೆಂದು ಹೇಳಲಾಗುತ್ತಿದೆ. ಆರಂಭದಲ್ಲಿ ದೇವರು ಮೇಂಗೊಟ್ಟೆ ಕಲ್ಲು ಎಂಬ ಜಾಗದಲ್ಲಿ ನಿಂತು ನೋಡಿದಾಗ ಕಾಫಿ ಕಳದ ದರ್ಶನವಾಗುತ್ತದೆ. ಆ ಜಾಗ ಸೂಕ್ತ ಅಲ್ಲವೆಂದು ತಿಳಿದು ನೀಲಕೆರೆ ಮುಂಭಾಗದ ಜಾಗ ಆರಿಸಿಕೊಳ್ಳಲಾಯಿತ್ತೆಂದು ಹೇಳುತ್ತಾರೆ.

ಭದ್ರಕಾಳಿ ದೇವರ ಬೇಡು ಹಬ್ಬ
ಚಂಬೆಬೆಳ್ಳಿಯೂರ್ ಬೋಡ್ ನಮ್ಮೆ ಐತಿಹಾಸಿಕ ಹಿನ್ನೆಲೆ ಹೊಂದಿರುವ ವರ್ಣರಂಜಿತ ಹಬ್ಬ. ಅದೇ ಚಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕುಕ್ಲೂರು ಕುಂದ ಶ್ರೀ ಮೂಲ ಭದ್ರಕಾಳಿ ದೇವರ ಬೇಡು ಹಬ್ಬವು ಪ್ರತಿ ವರ್ಷ ಮೇ ತಿಂಗಳ ೩ನೇ ವಾರ ನಡೆಯುತ್ತದೆ. ಹಬ್ಬ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಪರಿಶಿಷ್ಠ ಜನಾಂಗಕ್ಕೆ ಸೇರಿದವರು ಬಹು ಮುಖ್ಯ ಪಾತ್ರ ಮತ್ತು ಹೆಚ್ಚಿನ ಜವಬ್ದಾರಿ ಹೊಂದಿದ್ದಾರೆ.
೫ ರಿಂದ ೭ ದಿನಗಳ ಕಾಲ ನಡೆಯುವ ಬೇಡು ಹಬ್ಬ ಇದಾಗಿದೆ. ಕೊಡವ ಕ್ಯಾಲೆಂಡರ್ ಪ್ರಕಾರ ಕಾದ್ಯಾರು ೧ ರಂದು ಕಟ್ಟು ಬಿದ್ದು ಮರು ದಿನ ಕಾಪು. ಕಾಪು ಕಳೆದು ೩ ದಿನದಲ್ಲಿ ಹಬ್ಬ ಆರಂಭವಾಗುತ್ತದೆ. ರಾತ್ರಿ ಪೀಲಿ ಆಟ್ ನಡೆಯುತ್ತದೆ.

ಕುಟ್ಟಂಡ ಕುಟುಂಬದ ಒರ್ವ ವ್ಯಕ್ತಿ ಪೀಲಿಆಟ್ ಆಡುತ್ತಾರೆ. ಪೀಲಿಆಟ್ ಆಡುವವರು ಶುದ್ದ ಮುದ್ರಿಕೆಯಿಂದ ಇರುತ್ತಾರೆ. ಮರುದಿನ ಪಟ್ಟಣಿ. ಅನ್ನ, ಮಧು ಮಾಂಸ ಸೇವಿಸುವಂತಿಲ್ಲ. ಅದೇ ದಿನ ರಾತ್ರಿ ಬೇಡುಹಬ್ಬ ನಡೆಯುತ್ತದೆ. ವೇಷದಾರಿಗಳು ಮಾಳೇಟಿರ, ಕುಟ್ಟಂಡ, ತಾತಂಡ, ಮೊಣ್ಣಂಡ, ಕರ್ನಂಡ ಹಾಗು ಬ್ರಾಹ್ಮಣರ ಮನೆಗೆ ತೆರಳಿ ಭಿಕ್ಷಾಟನೆ ನಡೆಸಿ ಗಳಿಸಿದ ಹಣವನ್ನು ನಂದ್ಯಂಡ ಕಳದಲ್ಲಿ ದೇವರಿಗೆ ಒಪ್ಪಿಸಲಾಗುತ್ತದೆ.

ಅಪರಾಹ್ನ ೨ ಗಂಟೆಗೆ ಬೆತ್ತದ ಕುದುರೆ. ಮಾಳೇಟಿರ ವಕ್ಕದ ಕುದುರೆಯನ್ನು ತಾತಂಡ ಕುಟುಂಬದವರು, ನಂದ್ಯಂಡ ವಕ್ಕದ ಕುದುರೆಯನ್ನು ಮಾಳೇಟಿರ ಕುಟುಂಬದವರು, ಮೊಣ್ಣಂಡ ವಕ್ಕದ ಕುದುರೆಯನ್ನು ಕುಟ್ಟಂಡ ಕುಡುಂಬದವರು ತೆಗೆಯುತ್ತಾರೆ. ಮಾಳೇಟಿರ ಕುಟುಂಬ ದವರು ಊರು ತಕ್ಕರಾಗಿರುವದರಿಂದ ಮೊದಲ ಪ್ರಾಶಸ್ತ್ಯ ನೀಡಲಾಗುವುದು.

ಮಾಳೇಟಿರ ಕುಟಂಬದಿಂದ ಕುದುರೆ ಹೊರಟು ಮೊಣ್ಣಂಡ ಐನ್ ಮನೆಗೆ ತೆರಳಿ ಮೊಣ್ಣಂಡ ಕುದುರೆಯನ್ನು ಕರೆದುಕೊಂಡು ನಂದ್ಯಂಡ ಕಳಕ್ಕೆ ತೆರಳಿ ಅವರ ಕುದುರೆ ಕರೆದುಕೊಂಡು ಮೂರು ಕುದುರೆಗಳು ದೇವಾಲಯ ಪ್ರದೇಶಿಸುತ್ತಾರೆ.

ಮಾಳೇಟಿರ ಮನೆಯಿಂದ ಮಾರನೇಯ ದಿನ ಎತ್ತು ಪೋರಾಟ. ಅದೇ ದಿನ ರಾತ್ರಿ ಪಣಿಕ ಜನಾಂಗದವರು ನಂದ್ಯಂಡ ಕಳದಲ್ಲಿ ಶ್ರೀ ಮೂಲ ಭದ್ರಕಾಳಿಯ ಸಿರಿಮೊಗದೊಂದಿಗೆ ತರೆ ಕಟ್ಟಿ ತೆರಳಿ ಒಡ್ಡೋಲವಾಗಿ ದೇವಾಲಯಕ್ಕೆ ತೆರಳುತ್ತಾರೆ. ಕೆಲವು ಸಂಧರ್ಭದಲ್ಲಿ ಪುರಷರಿಗೆ ಮಾತ್ರ ಪ್ರಾಧನ್ಯತೆ ನೀಡಲಾಗುತ್ತಿದೆ. ತವರುಮನೆ ಹೆಣ್ಣುಮಕ್ಕಳು, ನೆಂಟರಿಷ್ಠರು ಅನ್ಯ ಊರುಗಳಿಗೆ ಉದ್ಯೋಗ ಅರಸಿ ನೆಲೆ ನಿಂತವರು ರಜೆ ತೆಗೆದುಕೊಂಡು ಬಂದು ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ.

ಮಾಳೇಟಿರ, ಮೊಣ್ಣಂಡ, ನಂದ್ಯಂಡ ಕುಟುಂಬದ ಒಬ್ಬೊಬ್ಬ ಸಣ್ಣ ಹುಡುಗರಿಗೆ ಹೆಣ್ಣಿನ ವೇಷ ಧರಿಸಿ ದೇವಾಲಯದಲ್ಲಿ ಚೂಳೆ ಹಬ್ಬವನ್ನ ಆಚರಿಸಲಾಗುವುದು.

೧೯೪೮ ರವರೆಗೆ ತಾತಂಡ ಕುಟುಂಬದ ಒರ್ವ ಸದಸ್ಯರಿಗೆ ದೇವರ ಆವೇಶ ಬರುತ್ತಿತ್ತು. ಆ ಸಂಧರ್ಭ ದೇವರ ಆಶೀರ್ವಾದ ನೀಡಿ ಇನ್ನು ಮುಂದೆ ನಾನು ಮನುಷ್ಯರಲ್ಲಿ ಕಾಣ ಬೇಕಾದರೆ ಊರಿನವರೆಗೆ ಕಷ್ಟ ಬಂದು ಮೊಣಕಾಲು ಊರಿನರು ಶ್ರದ್ಧಾಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರೆ ದರ್ಶನ ನೀಡುತ್ತೇನೆ ಎಂದ ವಾಗ್ದಾನ ನೀಡಿದ್ದಾರೆಂದು ಹೇಳಲಾಗುತ್ತಿದೆ.

ಹಬ್ಬದಲ್ಲಿ ೩ ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುತ್ತಾರೆ. ಬೇಡು ಹಬ್ಬದಲ್ಲಿ ಹೆಣ್ಣು ಮಕ್ಕಳು ವೇಷ ಧರಿಸುವಂತಿಲ್ಲ. ದೇವರ ಕಟ್ಟು ಬಿದ್ದ ನಂತರ ಊರಿನಲ್ಲಿ ಯಾವುದೇ ಪ್ರಾಣಿವಧೆ, ಹಸಿಮರ ಕಡೆಯುವುದು, ತೆಂಗಿನಕಾುಗೆ ಗುಂಡು ಹೊಡೆಯುವುದು, ಕೊಂಬುಕೊಟ್ಟ್ ವಾಲಗ ನಿಷೇಧವಾಗಿದೆ. ಈ ನಿಷೇಧವನ್ನು ತೆರೆಯ ದಿನ ರಾತ್ರಿ ಹಾರ ಕೊಡುವ ಮೂಲಕ ಕಟ್ಟನ್ನು ಸಡಿಲಿಸಲಾಗುವುದು.

**
ಎಂಟು ವರ್ಷದಿಂದ ಅರ್ಚಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನಿತ್ಯ ಪೂಜೆ ನಡೆಯುತ್ತಿದೆ. ದೇವಿ ಶಾಂತ ಸ್ವಾಭಾವದಲ್ಲಿದ್ದು, ಜಿಲ್ಲೆಯಲ್ಲಿ ಮೂಲ ಭದ್ರಕಾಳಿ ದೇವಾಲಯ ಇದೊಂದೆ ಆಗಿದೆ. ರೂಪ ಇಲ್ಲದಿದ್ದರು ಬಿಂಬ ರೂಪದಲ್ಲಿ ಇರುವಂತ ದೇವರು. ಏಕಾಂತದಲ್ಲಿ ಧ್ಯಾನ ಮಾಡು ವಾಗ ದೇವಿ ನಡೆದಾಡುವ ಶಬ್ದ ಕೇಳಿಸುತ್ತದೆ. ಇದು ಏಕತಾ ಮನೋಭಾವನೆ ಮೂಡಿಸುವ ದೇವಾಲಯ. ಶ್ರೀನಿವಾಸ್ ಭಟ್, ಅರ್ಚಕರು.

**
ಅಪಾರ ಶಕ್ತಿ ಇರುವ ಮೂಲ ಭದ್ರಕಾಳಿ ದೇವರಿಗೆ ಅಪಾರ ಸಂಖ್ಯೆಯ ಭಕ್ತರಿದ್ದಾರೆ. ನಂಬಿ ಬಂದ ಭಕ್ತರನ್ನು ಎಂದಿಗೂ ಕೈಬಿಟ್ಟಿಲ್ಲ. ದೇವಾಲಯದಲ್ಲಿ ಪ್ರತಿನಿತ್ಯ ಪೂಜೆ ನಡೆಯುತ್ತಿದೆ. ಅಮವಾಸ್ಯೆ ದಿನ ವಿಶೇಷ ಪೂಜೆ ನಡೆಯಲಿದೆ. ಕುಟ್ಟಂಡ ಪ್ರಭು, ಸ್ಥಳೀಯರು.

**
ಊರಿಗೆ ಸಂಬಂಧಿಸಿದ ಈ ದೇವಾಲಯದಲ್ಲಿ ಕೆಂಬಟ್ಟಿ ಜನಾಂಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ಹಾಗೂ ಜವಾಬ್ದಾರಿ ನೀಡಲಾಗಿದೆ. ಅಯ್ಯಪ್ಪ, ಮಮ್ಮುದ, ಕ್ಯಾತಮ್ಮ ದೇವರುಗಳು ಮೂಲ ಭದ್ರಕಾಳಿಗೆ ಸಂಬಂಧ ಪಟ್ಟ ದೇವಾಲಯಗಳಾಗಿದೆ. ಎಲ್ಲರೂ ಒಗ್ಗೂಡಿ ಸೌಹಾರ್ದತೆಯಿಂದ ಹಬ್ಬ ಹರಿದಿನ ಆಚರಿಸಲಾಗುತ್ತಿದೆ. ಮೊಣ್ಣಂಡ ಮೋತಿ ಕಾರ್ಯಪ್ಪ, ದೇವ ತಕ್ಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net