

ಕಂಪ್ಲಿ: ತಾಲೂಕಿನ ದೇವಲಾಪುರ ಗ್ರಾಮದ ಬಳಿ ಚೆಕ್‌ಡ್ಯಾಮ್‌ನಿಂದ ಹಾದು ಹೋದ ಪಿಕ್‌ಅಪ್ ಕಾಲುವೆಯ ನೀರು ಸೋರಿಕೆ ತಡೆಗಟ್ಟಲು ರೈತರು ಮಣ್ಣಿನ ಚೀಲಗಳ ಮೊರೆ ಹೋಗಿದ್ದಾರೆ.
ಪಿಕ್‌ಅಪ್ ಕಾಲುವೆಯ ಎರಡು ಬದಿಯ ತಡೆಗೋಡೆಗಳ ಎತ್ತರ ಕಡಿಮೆ ಇರುವುದರಿಂದ ಕುರಿ ಗಾದಿಲಿಂಗಪ್ಪ, ಪೂಜಾರಿ ಲಕ್ಷ್ಮಪ್ಪ ಸೇರಿ ನಾನಾ ರೈತರ ಗದ್ದೆಗೆ ನೀರು ನುಗ್ಗಿವೆ. ಇದರಿಂದ ನಾಟಿ ಮಾಡಿದ ಸಸಿ, ಪೈರು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಅಲ್ಲದೆ ನೀರು ಪೋಲಾಗುವುದರಿಂದ ಕಡೆ ಅಂಚಿನ ಭೂಮಿಗೆ ಜೀವಜಲ ಪೂರೈಕೆಯಾಗುತ್ತಿಲ್ಲ. ಇದರಿಂದ ಸಂಕಷ್ಟ ಅನುಭವಿಸುವಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ನೀರು ಸಂಗ್ರಹ ಕುಸಿತ ಭದ್ರಾ ಅಚ್ಚುಕಟ್ಟಿನಲ್ಲಿ ತಳಮಳ
ಒಂದೂವರೆ ಎರಡು ಅಡಿಯಷ್ಟು ತಡೆಗೋಡೆಗಳನ್ನು ಎತ್ತರಿಸಿ ಅಭಿವೃದ್ಧಿಪಡಿಸಬೇಕು. ಅಲ್ಲದೆ, ಮುಂದೆ ಪಿಕ್‌ಅಪ್ ಕಾಲುವೆಗೆ ಗೋಡೆ ನಿರ್ಮಿಸಬೇಕಿದೆ. ಈ ವಿಷಯವನ್ನು ನೀರಾವರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಶಾಸಕರು ಮುತುವರ್ಜಿವಹಿಸಿ ಸಮಸ್ಯೆ ಪರಿಹರಿಸಬೇಕು ಎಂದು ರೈತರಾದ ಪೂಜಾರಿ ಲಕ್ಷ್ಮಪ್ಪ, ತಿಪ್ಪಮ್ಮ, ಕುರಿ ಪಂಪಾಪತಿ, ಕುರಿ ಹುಚ್ಚಪ್ಪ, ಹೊಳೆಕಡೆ ಮಹೇಶ್, ಪವಾಡಿ ಸಂತೆ ಹನುಮಂತಪ್ಪ, ತುಂಬಳದ ಈರಣ್ಣ, ತುಂಬಳದ ವಿರುಪಣ್ಣ, ಮಾರೇಶ್, ರಮೇಶ್, ಕುರಿ ಕರಿಬಸಪ್ಪ, ಹೊನ್ನಯ್ಯ, ಸಂಗ್ಟಿ ಹೇಮಣ್ಣ, ಕೆ.ಹನುಮಯ್ಯ ಒತ್ತಾಯಿಸಿದರು.