ದೇವಳ ಸಮಿತಿಗೆ ಈಶ್ವರ ಭಟ್ ಆಯ್ಕೆಗೆ ವಿರೋಧ - ಸಿಎಂ, ಧಾರ್ಮಿಕ ದತ್ತಿ ಇಲಾಖೆಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ ಸಹೋದರ ಸಂಬಂಧಿ

WhatsApp Image 2024-11-01 at 20.21.11_a881b0cb
Published on

ಪುತ್ತೂರು: ಶ್ರೀ ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಹಲವು ಮಂದಿ ಕಣದಲ್ಲಿದ್ದು, ಹಿರಿಯ ಕಾಂಗ್ರೆಸ್ ಮುಖಂಡ ಪಂಜಿಗುಡ್ಡೆ ಈಶ್ವರ ಭಟ್ ಅವರನ್ನು ಯಾವುದೇ ಕಾರಣಕ್ಕೂ ಅಧ್ಯಕ್ಷರನ್ನಾಗಿ ಮಾಡಬಾರದು ಎಂದು ಅವರ ಸಹೋದರ ಸಂಬಂಧಿ ಸೇಡಿಯಾಪು ಅನಿಲಕೊಡಿ ನಿವಾಸಿ ವಸಂತಲಕ್ಷ್ಮಿಎಂಬುವರು ಮುಖ್ಯಮಂತ್ರಿ ಹಾಗು ಧಾರ್ಮಿಕ ಧಾರ್ಮಿಕ ದತ್ತಿ ಸಚಿವರಿಗೆ ಪತ್ರ ಬರೆದಿರುವುದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿದೆ.

ಕಳಂಕಿತರಿಗೆ ವ್ಯವಸ್ಥಾಪನಾ ಸಮಿತಿಯಲ್ಲಿ ಜವಾಬ್ದಾರಿ ನೀಡುವುದರಿಂದ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ಬರಲಿದೆ. ಪಂಜಿಗುಡ್ಡೆ ಈಶ್ವರ ಭಟ್ ವಿರುದ್ಧ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಬೇರೆಯವರ ಪಹಣಿ ಬಳಸಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ವಂಚನೆ, ಸರ್ಕಾರಿ ಆಸ್ತಿ ಕಬಳಿಸಲು ಬೇನಾಮಿ ಅರ್ಜಿ ಸಲ್ಲಿಕೆ, ಕುಟುಂಬದ ಆಸ್ತಿಯಲ್ಲಿ ಪಾಲು ನೀಡಬೇಕೆಂದು ಡಿಕ್ರಿಯಾಗಿದ್ದರೂ ಕೋರ್ಟ್ ಆದೇಶ ಪಾಲಿಸದಿರುವುದು, ತಂದೆ ಅಸೌಖ್ಯದಿಂದಾಗಿ ಮಲಗಿದಲ್ಲಿ ಇದ್ದಾಗ ವ್ಯವಸ್ಥಾಪತ್ರ, ವಿಲ್ ಮಾಡಿ ಕುಟುಂಬದ ಎಲ್ಲ ಆಸ್ತಿಗಳನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ವಸಂತಲಕ್ಷ್ಮಿ ಪತ್ರದಲ್ಲಿ ಆರೋಪಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ ಬಳಿಕ ಸರ್ಕಾರ ಬದಲಾವಣೆಯಾಗಿದ್ದು, ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ಎಲ್ಲ ಹಿಂದು ದೇವಾಲಯಗಳಿಗೆ ಆಡಳಿತ ಮಂಡಳಿಯನ್ನು ಹೊಸದಾಗಿ ನೇಮಕ ಮಾಡಲಾಗುತ್ತಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಲು ಈಶ್ವರ ಭಟ್ ಪ್ರಯತ್ನಿಸುತ್ತಿರುವುದು ತಿಳಿದು ಬಂದಿದ್ದು, ಹಣ ಬಲ ಮತ್ತು ರಾಜಕೀಯ ಪ್ರಭಾವದಿಂದ ಅಧ್ಯಕ್ಷ ಸ್ಥಾನಕ್ಕೆ ನಿಯುಕ್ತಿಗೊಳಿಸಿದರೆ ಅದರಿಂದ ’ಆಗುವ ಹಾನಿಗೆ ಧಾರ್ಮಿಕ ದತ್ತಿ ಇಲಾಖೆ ಜವಾಬ್ದಾರಿಯಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ, ಧಾರ್ಮಿಕ ದತ್ತಿ ಇಲಾಖೆಯ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಾಜಿ ಸಚಿವ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜಾ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಪತ್ರ ಬರೆದಿದ್ದು, ಅದರ ಪ್ರತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net