ಐವರಿಗೆ ಕೋವಿಡ್ ಸೋಂಕು ದೃಢ

Corona
Published on

ದೇವರಹಿಪ್ಪರಗಿ: ಕರೊನಾ ಸೇನಾನಿಗಳಾದ ಮೂವರು ಆಶಾ ಕಾರ್ಯಕರ್ತೆಯರು, ಒಬ್ಬ ಪೊಲೀಸ್ ಸಿಬ್ಬಂದಿ ಸೇರಿದಂತೆ ಐವರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ.
ಪಟ್ಟಣದಲ್ಲಿ ಬುಧವಾರ ಒಟ್ಟು ಐದು ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಈ ಐವರಲ್ಲಿ ಮೂವರು ಕಳೆದ ಮೂರು ತಿಂಗಳಿಂದ ಕರೊನಾ ಸೇನಾನಿಗಳಾಗಿ ಕಾರ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರಾಗಿದ್ದಾರೆ. ಉಳಿದ ಇಬ್ಬರಲ್ಲಿ ಒಬ್ಬರು ಪೊಲೀಸ್ ಇಲಾಖೆ ಸಿಬ್ಬಂದಿಯಾಗಿದ್ದರೆ ಇನ್ನೊಬ್ಬರು ಪಡಗಾನೂರ ಗ್ರಾಮದ ಮಹಿಳೆಯಾಗಿದ್ದಾರೆ. ಇವರೆಲ್ಲರನ್ನೂ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಿ ಉಪಚಾರ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಅವರ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ತಹಸೀಲ್ದಾರ್ ವೈ.ಬಿ.ನಾಗಠಾಣ ತಿಳಿಸಿದ್ದಾರೆ.
ಕೇವಲ 10 ದಿನಗಳ ಹಿಂದೆ ದೇವರಹಿಪ್ಪರಗಿ, ಪಡಗಾನೂರ ಗ್ರಾಮ ಸೇರಿದಂತೆ ಇಬ್ಬರಲ್ಲಿ ಸೋಂಕು ದೃಢವಾದ ವರದಿಯಾಗಿತ್ತು. ಈಗ ಮತ್ತೆ ಐವರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟಾರೆ ಏಳು ಕೋವಿಡ್ ಪ್ರಕರಣಗಳು ದಾಖಲಾದಂತಾಗಿದೆ. ಸೋಂಕು ದೃಢವಾಗುತ್ತಿದ್ದಂತೆಯೇ ಆಶಾ ಹಾಗೂ ಪೊಲೀಸ್ ಸಿಬ್ಬಂದಿಗೆ ಆತಂಕ ಎದುರಾಗಿದ್ದು, ಬಹುತೇಕರು ಸ್ವಯಂ ಪ್ರೇರಿತರಾಗಿ ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net