

ದೇವದುರ್ಗ: ಪಟ್ಟಣ ಸೇರಿ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿವ ನೀರು ಒದಗಿಸುವ ದೃಷ್ಟಿಯಿಂದ ಪ್ರಧಾನಮಂತ್ರಿ ಜಲ ಜೀವನ್ ಯೋಜನೆ ಜಾರಿಗೊಳಿಸಿದ್ದು, ಕಾಮಗಾರಿ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಜಿಪಂ ಸಿಇಒ ಈಶ್ವರಕುಮಾರ ಕಾಂದೂ ಸೂಚಿಸಿದರು.
ಪಟ್ಟಣ ವಿವಿಧ ವಾರ್ಡ್, ಮಸರಕಲ್ ಸೇರಿ ವಿವಿಧೆಡೆ ಶುಕ್ರವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಜಲ ಜೀವನ್ ಯೋಜನೆ ಕಾಮಗಾರಿ ಬಗ್ಗೆ ಹಲವು ದೂರುಗಳು ಬಂದಿವೆ.
ಪೈಪ್‌ಲೈನ್ ಕಾಮಗಾರಿ, ನಳ ಸಂಪರ್ಕ, ಟ್ಯಾಪ್ ಜೋಡಣೆ ಕೆಲಸ ಕಳಪೆಯಾಗಿವೆ ಎಂದು ಜನರು ಆರೋಪಿಸುತ್ತಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಗುಣಮಟ್ಟದಲ್ಲಿ ನಿರ್ವಹಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಬೇಕು.ಕುಡಿವ ನೀರಿನ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶುದ್ಧ ನೀರಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಸರ್ಕಾರಿ ಶಾಲೆಗಳಿಗೆ ತಿಂಗಳಿಗೊಮ್ಮೆ ಅಧಿಕಾರಿಗಳು ತೆರಳಬೇಕು. ಅಲ್ಲಿನ ಕಟ್ಟಡ, ಬಿಸಿಯೂಟ, ಸೌಲಭ್ಯಗಳ ಬಗ್ಗೆ ಪರಿಶೀಲಿಸಬೇಕು. ಎಲ್ಲ ಶಾಲೆಗೂ ಶೌಚಗೃಹ ನಿರ್ಮಿಸಿದ್ದು, ನಿರ್ವಹಣೆ ಮಾಡಲು ಆದೇಶ ನೀಡಬೇಕು.
ಮಕ್ಕಳಿಗೆ ಗುಣಮಟ್ಟದ ಆಹಾರ, ಶಿಕ್ಷಣ ನೀಡಲು ಶಿಕ್ಷಕರಿಗೆ ಸಲಹೆ-ಸೂಚನೆ ಕೊಡಬೇಕು ಎಂದ ಅವರು, ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕೂಸಿನಮನೆ ಪರಿಶೀಲಿಸಿದರು.
ಕೂಸಿನ ಮನೆಯನ್ನು ಹವಾ ನಿಯಂತ್ರಣದಲ್ಲಿ ಇರಿಸುವ ಜತೆಗೆ ಸ್ವಚ್ಛತೆ ಕಾಪಾಡಬೇಕು. ರೋಗಿಗಳಿಗೆ ಸಮರ್ಪಕ ಚಿಕಿತ್ಸೆ, ಔಷಧ ನೀಡಬೇಕೆಂದರು.
ಬಳಿಕ ಮಸರಕಲ್ ವಲಯ ವ್ಯಾಪ್ತಿಯ ಅಂಗನವಾಡಿ ಕೇಂದ್ರಕ್ಕೆ ತೆರಳಿ ಪರಿಶೀಲಿಸಿದರು. ಮಕ್ಕಳಿಗೆ ಪೌಷ್ಟಿಕ ಆಹಾರ ತಯಾರಿಸಿ ಕೊಡಬೇಕು. ಮಕ್ಕಳು, ಗರ್ಭಿಣಿಯರು, ತಾಯಂದಿರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದು ಸೂಚಿಸಿದರು.