

ದೇವದುರ್ಗ: ತಾಲೂಕಿನ ಅಮರಾಪುರ ಗ್ರಾಪಂ ವ್ಯಾಪ್ತಿಯ ಗಾಜಲದಿನ್ನಿ, ಮುಕ್ಕನಾಳ, ಪರಾಪುರ ಮತ್ತಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಬುಧವಾರ ಭೇಟಿ ನೀಡಿ ಪರಿಶೀಲಿಸಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
2019-20ನೇ ಸಾಲಿನಲ್ಲಿ ಮುಖ್ಯರಸ್ತೆಯಿಂದ 8ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದಕ್ಕೆ ಹರಿಜನ ಮತ್ತು ಗಿರಿಜನ ಕಲ್ಯಾಣ ಅಭಿವೃದ್ಧಿ ಯೋಜನೆಯಡಿ 20ಕೋಟಿ ರೂ. ಅನುದಾನ ನೀಡಿದ್ದು, ಸದರಿ ಕಾಮಗಾರಿ ಕೈಗೊಂಡು ವರ್ಷ ಕಳೆದರೂ ಪೂರ್ಣಗೊಳಿಸಿಲ್ಲ ಯಾಕೆ? ರಸ್ತೆಗೆ ಕೇವಲ ಜಿಲ್ಲಿಕಲ್ಲು ಹಾಕಿ ಸುಮ್ಮನಿರುವುದೇಕೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.
ತಾಲೂಕಿನಲ್ಲಿ ಹಲವು ರಸ್ತೆ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಈ ಬಗ್ಗೆ ನಮಗೆ ಗ್ರಾಮಸ್ಥರಿಂದ ಪದೇಪದೆ ದೂರುಗಳು ಕೇಳಿಬರುತ್ತಿವೆ. ಕೂಡಲೇ ಸದರಿ ರಸ್ತೆಗೆ ಡಾಂಬರ್ ಹಾಕಿ ಅಭಿವೃದ್ಧಿಪಡಿಸಬೇಕು. ಬಾಕಿ ಕಾಮಗಾರಿಗಳನ್ನು ನಿಗದಿ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಲೋಕೋಪಯೋಗಿ ಇಲಾಖೆ ಎಇಇ ಚನ್ನಬಸವ ನಾಯಕ ಮಕಾಲೆ, ಸಹಾಯಕ ಇಂಜಿನಿಯರ್ ನುಶ್ರತ್ ಅಲಿ, ಇಂಜಿನಿಯರ್ ಉಮಾಪತಿ, ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್ ಇದ್ದರು.