

ದೇವದುರ್ಗ: ತಾಲೂಕಿನಲ್ಲಿ ಕೃಷ್ಣಾ ನದಿಯ ಭೋರ್ಗರೆತ ಸತತ ಐದನೇ ದಿನವೂ ಮುಂದುವರಿದಿದ್ದು, ನದಿದಂಡೆ ಗ್ರಾಮಗಳ ರೈತರ ಜಮೀನಿಗೆ ನೀರು ನುಗ್ಗಿದೆ. ನದಿಯಲ್ಲಿ ದಿನೇದಿನೆ ನೀರಿನ ಮಟ್ಟ ಏರುಗತಿಯತ್ತ ಸಾಗುತ್ತಿದ್ದು ರೈತರಲ್ಲಿ ನೆರೆಯ ಕಾರ್ಮೋಡ ಹೆಚ್ಚಾಗಿದೆ.
ನಾರಾಯಣಪುರ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದ್ದರಿಂದ ಶುಕ್ರವಾರ ರಾತ್ರಿ ನದಿಗೆ 3,11,175 ಕ್ಯೂಸೆಕ್ ನೀರು ಹರಿಸಲಾಗಿದೆ. ಶನಿವಾರ ಬೆಳಗ್ಗೆ ನೀರು ಯಥಾರೀತಿ ಹರಿಯುತ್ತಿದ್ದು ತಾಲೂಕಿನಲ್ಲಿ ಆತಂಕ ಮುಂದುವರಿದಿದೆ. ಹೂವಿನಹೆಡಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಹೊರಹರಿವು 3.5 ಲಕ್ಷ ಕ್ಯೂಸೆಕ್‌ಗೆ ಹೆಚ್ಚಾದರೆ ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್ ಕೂಡ ಮುಳುಗಡೆಯಾಗುವ ಸಾಧ್ಯತೆಯಿದೆ.
ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್‌ನ ಎಲ್ಲ ಗೇಟ್‌ಗಳನ್ನು ಮೇಲೆತ್ತಿ ನದಿಗೆ ನೀರು ಹರಿಸಲಾಗುತ್ತಿದೆ. ವೀರಗೋಟ, ಚಿಂಚೋಡಿ, ಲಿಂಗದಹಳ್ಳಿ, ಬಾಗೂರು, ಗೋಪಳಾಪುರ, ಅಂಜಳ, ನೀಲವಂಜಿ, ಹೂವಿನಹೆಡಗಿ, ಜೋಳದಹೆಡಗಿ, ಕೊಪ್ಪರ, ಗೂಗಲ್ ಸೇರಿ ವಿವಿಧ ಗ್ರಾಮಗಳ ರೈತರು ನದಿದಂಡೆ ಮೇಲೆ ಅಳವಡಿಸಿದ್ದ ವಿದ್ಯುತ್ ಪರಿವರ್ತಕ (ಟಿಸಿ), ಕಂಬಗಳು ಜಲಾವೃತ್ತವಾಗಿವೆ. ಕೆಲ ರೈತರು ಪಂಪ್‌ಸೆಟ್ ಬಿಚ್ಚಿಕೊಂಡು ರಕ್ಷಣೆ ಮಾಡಿಕೊಂಡಿದ್ದರೆ ಇನ್ನು ಕೆಲ ರೈತರ ಪೈಪ್‌ಗಳು ನೀರಿನಲ್ಲಿ ಕೊಚ್ಚಿಹೋಗಿವೆ.
ಕೊಪ್ಪರ ಗ್ರಾಮದ ರೈತರಾದ ಶಂಕರ್ ಪಾಟೀಲ್, ಶಿವರಾಜಪ್ಪ, ಸಿದ್ದರಾಮಪ್ಪ, ನಿರ್ಮಲಾ, ಭೀಮಾಶಂಕರಗೌಡ ಸೇರಿ ಹಲವು ರೈತರ ಜಮೀನಿಗೆ ನೀರು ನುಗ್ಗಿದೆ. ಇದರಿಂದ ಭತ್ತ, ತೊಗರಿ, ಹತ್ತಿ ಸೇರಿ ವಿವಿಧ ಬೆಳೆಗಳು ನೀರಿನಲ್ಲಿ ಮುಳುಗಿವೆ. ಹೂವಿನಹೆಡಗಿ, ಅಂಜಳ, ಲಿಂಗದಹಳ್ಳಿ, ಗೂಗಲ್ ಸೇರಿ ವಿವಿಧ ಹಳ್ಳಿಗಳಲ್ಲಿ ಕೃಷಿ ಪಂಪ್‌ಸೆಟ್ ಮುಳುಗಡೆಯಾಗಿವೆ. ಇತ್ತೀಚೆಗೆ ನಾಟಿ ಮಾಡಿದ್ದ ಭತ್ತದ ಬೆಳೆ ಕೊಚ್ಚಿಹೋಗಿದ್ದು ರೈತರು ಕಂಗಲಾಗಿದ್ದಾರೆ.
ಇನ್ನು ಕೃಷ್ಣೆಯ ಅರ್ಭಟಕ್ಕೆ ಹಲವು ದೇವಸ್ಥಾನಗಳು ಜಲಾವೃತವಾಗಿವೆ. ವೀರಗೋಟ ಗ್ರಾಮದ ಆದಿಮೌನಲಿಂಗೇಶ್ವರ ದೇವಸ್ಥಾನದ ಸಮೀಪ ನೀರು ಬಂದಿದ್ದು, ಹೂವಿನಹೆಡಗಿಯ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಕೊಪ್ಪರದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಜಲಾವೃತವಾಗಿದೆ. ಇದೇ ಗ್ರಾಮದ ಬಸವೇಶ್ವರ ದೇವಸ್ಥಾನ, ಆಂಜನೇಯ ದೇವಸ್ಥಾನ ಹಾಗೂ ಪ್ರವಾಸಿ ಮಂದಿರ ಸುತ್ತಲೂ ನೀರು ಆವರಿಸಿದೆ. ಗೂಗಲ್ ಗ್ರಾಮದ ಅಲ್ಲಮಪ್ರಭುದೇವ ದೇವಸ್ಥಾನದ ಗೋಡೆಗೆ ನದಿ ನೀರು ತಾಕಿದೆ.