

ದೇವದುರ್ಗ: ಕುರುಬ ಸಮುದಾಯದ ನಾಲ್ಕು ವಿಭಾಗೀಯ ಮಠಗಳಾದ ಚಿತ್ರದುರ್ಗ, ಬೆಂಗಳೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗದ ತಿಂಥಣಿ ಬ್ರಿಡ್ಜ್‌ನ ಕಾಗಿನೆಲೆ ಕನಕಗುರುಪೀಠದ ಅಭಿವೃದ್ಧಿ ಆದ್ಯತೆ ನೀಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಸವರಾಜ್ ಭೈರತಿ ಹೇಳಿದರು.
ತಾಲೂಕಿನ ತಿಂಥಣಿ ಬ್ರಿಡ್ಜ್‌ನ ಕಾಗಿನೆಲೆ ಕನಕಗುರುಪೀಠದಲ್ಲಿ ಆಯೋಜಿಸಿದ್ದ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಟಗರಜೋಗಿಗಳು, ಹೆಳವರು ಹಾಗೂ ಕಾಡುಸಿದ್ಧರ ಸಮಾವೇಶ ಉದ್ಘಾಟಿಸಿ ಬುಧವಾರ ಮಾತನಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲ ಮಠಗಳ ಅಭಿವೃದ್ಧಿಗೆ ಮುಂದಾಗಿದ್ದು, ಕುರುಬರ ಮಠಕ್ಕೂ ಆದ್ಯತೆ ನೀಡಲಿದ್ದಾರೆ. ಈ ಬಗ್ಗೆ ಸರ್ಕಾರ ಹಾಗೂ ಮುಖ್ಯಮಂತ್ರಿ ಜತೆಗೆ ಚರ್ಚಿಸಿ ಮಠಗಳಿಗೆ ಹೆಚ್ಚಿನ ಅನುದಾನ ಕೊಡಿಸಲು ಪ್ರಯತ್ನಿಸುವೆ ಎಂದರು.
ಮಠಗಳು ಅಭಿವೃದ್ಧಿಯಾದರೆ ಮಾತ್ರ, ಸಮುದಾಯಗಳ ಅಭಿವೃದ್ಧಿ ಸಾಧ್ಯವಿದೆ. ಕಾಗಿನೆಲೆ ಕನಕಗುರುಪೀಠ ಸಮಾಜದಲ್ಲಿ ತುಳಿತಕ್ಕೊಳಗಾದ ಸಮುದಾಯಗಳನ್ನು ಒಗ್ಗೂಡಿಸಿ ಜಾಗೃತಿ ಮೂಡಿಸುತ್ತಿದೆ. ಈ ಸಂಸ್ಥಾನ ಕೇವಲ ಹಾಲುಮತಕ್ಕೆ ಸೀಮಿತವಾಗಿಲ್ಲ. ಎಲ್ಲ ಜಾತಿಗಳ ಜನರ ಧ್ವನಿಯಾಗಿದೆ ಎಂದರು.
ಪೀಠಾಧಿಪತಿ ಸಿದ್ದರಾಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಹೆಳವರು, ಟಗರಜೋಗಿಗಳು, ಕಾಡು ಸಿದ್ಧರು ಸಮಾಜದಲ್ಲಿ ತುಳಿತಕ್ಕೆ ಒಳಗಾಗಿ, ಅವರ ಸಂಸ್ಕೃತಿ ನಸಿಸುತ್ತಿದೆ. 70ಕ್ಕೂ ಹೆಚ್ಚು ಉಪಪಂಗಡಗಳು ತಮ್ಮ ಅಸ್ತಿತ್ವ ಕಳೆದು ಕೊಳ್ಳುವ ಸ್ಥಿತಿಗೆ ಬಂದಿವೆ. ಈ ಸಮುದಾಯಗಳನ್ನು ಉಳಿಸಿ, ಅವರ ಸಂಸ್ಕೃತಿ ಬೆಳೆಸಬೇಕು. ಈ ಹಿನ್ನೆಲೆಯಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ ಎಂದು ಹೇಳಿದರು.
ವಕೀಲ ಎಚ್.ಎಸ್.ಹೆಳವರಗೆ ಹಾಲುಮತ ಭಾಸ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಡಿಸಿ ದುರುಗೇಶ, ಭಾಸ್ಕರ್ ದಾಸ್ ಎಕ್ಕಾರು, ಪ್ರೊ.ಕೆ.ಎಂ.ಮೇತ್ರಿ, ಡಾ.ಮಲ್ಲಿಕಾರ್ಜುನ ಮಾನ್ಪಡೆ ಅವರಿಗೆ ಸನ್ಮಾನಿಸಲಾಯಿತು. ಹೆಳವರು, ಕಾಡುಸಿದ್ಧರು ಪ್ರದರ್ಶನ ನೀಡಿ ಗಮನ ಸೆಳೆದರು. ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಸ್ಪರ್ಧೆ ನಡೆಯಿತು.
ಮುರುಘಾಮಠದ ಶ್ರೀಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ಬೆಂಗಳೂರಿನ ಕನಕಗುರುಪೀಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಎಚ್.ಎಂ.ರೇವಣ್ಣ ಅಧ್ಯಕ್ಷತೆ ವಹಿಸಿದ್ದರು. ಶ್ರೀಶಿವಸಿದ್ದೇಶ್ವರ ಸ್ವಾಮೀಜಿ, ಶ್ರೀಬೀರಪ್ಪ ಸ್ವಾಮೀಜಿ, ವರದಾನೇಶ್ವರ ಸ್ವಾಮೀಜಿ, ಅಯ್ಯಳೇಶ್ವರ ಸ್ವಾಮೀಜಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾರೆಪ್ಪ ಇತರರಿದ್ದರು.