

ದೇವದುರ್ಗ: ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ನಾಲ್ಕು ಕಾರ್ಮಿಕ ಸಂಹಿತೆ ವಿರೋಧಿಸಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಸಂಘಟನೆ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ದುಡಿಯುವ ವರ್ಗಕ್ಕೆ ಮಾರಕವಾಗಿರುವ ನಾಲ್ಕು ಕಾರ್ಮಿಕ ಕೋಡ್‌ಗಳನ್ನು ಜಾರಿಗೆ ತರಲು ಮುಂದಾಗಿದ್ದು ಸರಿಯಲ್ಲ. ಸಂಹಿತೆಗಳು ದುಡಿಯುವ ಕಾರ್ಮಿಕರನ್ನು ಶೋಷಣೆ ಮಾಡಲಿವೆ. ಇದರಿಂದ ಕಾರ್ಮಿಕರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳಲಿದ್ದಾರೆ. ಕೇಂದ್ರ ಸರ್ಕಾರ ಕಳೆದ 11 ವರ್ಷಗಳಿಂದ ಜನವಿರೋಧಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.
ಕೂಡಲೇ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ಕನಿಷ್ಠ ವೇತನ ಜಾರಿಗೆ ತಂದು ಎಲ್ಲ ಕಾರ್ಮಿಕರಿಗೆ 31ಸಾವಿರ ರೂ. ವೇತನ ನೀಡಬೇಕು. 8ಗಂಟೆಗಳ ಕೆಲಸ ನೀಡುವ ಜತೆಗೆ ರಜಾದಿನಗಳು, ಸಾಮಾಜಿಕ ಭದ್ರತಾ ಪ್ರಯೋಜನೆಗಳನ್ನು ಕಾರ್ಮಿಕರಿಗೆ ನೀಡಬೇಕು. ಗುತ್ತಿಗೆ ಪದ್ಧತಿ ರದ್ದುಪಡಿಸಿ ಕಾಯಂ ಜೀವನ ಭದ್ರತೆ ಒದಗಿಸಬೇಕು. ವಲಸೆ ಕಾರ್ಮಿಕರಿಗೆ ಕಾನೂನು ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಉಪಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ತಾಲೂಕು ಅಧ್ಯಕ್ಷ ಕೆ.ಗಿರಿಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ದುರುಗಣ್ಣ ಇರಬಗೇರಾ, ಹನುಮಂತ್ರಾಯ ಪೂಜಾರಿ, ರಮೇಶ, ಸಿದ್ದಲಿಂಗ, ಸದಾಶಿವ ಇತರರಿದ್ದರು.