ನೀರು ಹರಿಸಲು ಒತ್ತಾಯಿಸಿ 29ಕ್ಕೆ ಪಾದಯಾತ್ರೆ

Roopa Srinivas Nayak Farmers union
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ) ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರೂಪ ಶ್ರೀನಿವಾಸ್ ನಾಯಕ.
Published on

ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆಗೆ ಏ.15ರವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಮಾ.29ರಂದು ಸಿರವಾರ ಕ್ರಾಸ್‌ನಿಂದ ತಹಸಿಲ್ ಕಚೇರಿವರೆಗೆ ರೈತರ ಬೃಹತ್ ಪ್ರತಿಭಟನಾ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ) ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರೂಪ ಶ್ರೀನಿವಾಸ್ ನಾಯಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾ.21ರವರೆಗೆ ವಾರಬಂಧಿ ಆಧಾರದಲ್ಲಿ ನೀರು ಹರಿಸುವುದಾಗಿ ತೀರ್ಮಾನ ಕೈಗೊಳ್ಳಲಾಗಿದೆ. ಏ.15ರವರೆಗೆ ನೀರು ಹರಿಸಿದರೆ ಮಾತ್ರ ಮೆಣಸಿನಕಾಯಿ, ಭತ್ತ, ಹತ್ತಿ, ಸಜ್ಜೆ ಸೇರಿ ವಿವಿಧ ಬೆಳೆಗಳು ಕೈಸೇರಲಿವೆ. ನೀರಿನ ಹರಿವು ಬಂದ್ ಮಾಡಿದರೆ, ಬಹುತೇಕ ಬೆಳೆಗಳು ಹಾಳಾಗಲಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಲಿದೆ.

ಬೆಳೆ ಬರುವವರೆಗೆ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ರೈತ ಸಂಘಟನೆಗಳು ೀಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಅತಿಯಾದ ಮಳೆಯಿಂದ ಹತ್ತಿ, ತೊಗರಿ, ಮೆಣಸಿನಕಾಯಿ ಬೆಳೆ ನಾಶವಾಗಿದೆ. ಇದನ್ನು ತೆಗೆದ ರೈತರು, ಸಜ್ಜೆ, ಹೈಬ್ರಿಡ್ ಜೋಳ ಬಿತ್ತನೆ ಮಾಡಿದ್ದು, ಸದ್ಯ ಕಾಳುಕಟ್ಟಿ ಸಮೃದ್ಧವಾಗಿ ಬೆಳೆದಿವೆ. ನೀರು ನಿಲುಗಡೆಗೊಳಿಸಿದರೆ, ಈ ಬೆಳೆಯೂ ನಷ್ಟವಾಗಲಿವೆ ಎಂದರು.

ಏ.15ರವರೆಗೆ ನೀರು ಹರಿಸುವ ಜತೆಗೆ ಡಿಸ್ಟ್ರಿಬ್ಯೂಟರ್ ಸಂ.15,16,17,18ರ ಕೊನೇ ಭಾಗಕ್ಕೆ ಸಮರ್ಪಕವಾಗಿ ನೀರು ತಲುಪುವಂತೆ ನೋಡಿಕೊಳ್ಳಬೇಕು. 9ಎ ಕಾಲುವೆ ಕಳಪೆ ಕಾಮಗಾರಿ ಬಗ್ಗೆ ತನಿಖೆ ನಡೆಸಬೇಕು ಎಂದು ರೂಪ ಶ್ರೀನಿವಾಸ್ ಒತ್ತಾಯಿಸಿದರು. ಮುಖಂಡರಾದ ಮರಿಲಿಂಗ ಪಾಟೀಲ್, ಯಲ್ಲಗೌಡ, ಜಹೀರ್ ಪಾಷಾ, ಶಿವ ಶೇಖರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net