

ದೇವದುರ್ಗ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಸಂಜೀವಿನಿಯಂತಿದ್ದ ಪ್ರಧಾನಮಂತ್ರಿ ಜನೌಷಧ ಕೇಂದ್ರ ಎರಡು ತಿಂಗಳಿನಿಂದ ಬಂದ್‌ಆಗಿದ್ದು ತಕ್ಷಣವೇ ಕೇಂದ್ರ ಆರಂಭಿಸಿ ಬಡವರಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿ ಟಿಎಚ್‌ಒ ಡಾ.ಬನದೇಶ್ವರಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ವೇದಿಕೆ ಗುರುವಾರ ಮನವಿ ಸಲ್ಲಿಸಿತು.
ಪಟ್ಟಣದ ಬಸ್ ನಿಲ್ದಾಣ ಸಮೀಪ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಧಾನಮಂತ್ರಿ ಜನೌಷಧ ಕೇಂದ್ರ ತೆರೆಯಲಾಗಿದೆ. ಆದರೆ, ಆಸ್ಪತ್ರೆಯಲ್ಲಿ ತೆರೆದ ಜನೌಷಧ ಕೇಂದ್ರವನ್ನು ಎರಡು ತಿಂಗಳಿನಿಂದ ಬಂದ್ ಮಾಡಿದ್ದು, ಇದರಿಂದ ರೋಗಿಗಳಿಗೆ ಔಷಧ ಸಿಗುತ್ತಿಲ್ಲ. ಅನಿವಾರ್ಯವಾಗಿ ಹೆಚ್ಚು ಹಣ ನೀಡಿ ಖಾಸಗಿ ಮೆಡಿಕಲ್ ಶಾಪ್‌ಗಳಲ್ಲಿ ತರುವ ಸ್ಥಿತಿಯಿದೆ.
ಎರಡು ತಿಂಗಳಿನಿಂದ ಕೇಂದ್ರ ಬಂದ್ ಆಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಇದರಿಂದ ಬಡವರು ಹಾಗೂ ದೀರ್ಘ ಕಾಯಿಲೆಯುಳ್ಳವರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆದರೂ ಔಷಧ ಸಿಗದೆ ಜನರು ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ ಜನೌಷಧ ಕೇಂದ್ರ ಪ್ರಾರಂಭ ಮಾಡಿ ಜನರಿಗೆ ಉತ್ತಮ ಸೇವೆ ಒದಗಿಸಬೇಕೆಂದು ವೇದಿಕೆ ಒತ್ತಾಯಿಸಿದೆ. ಪ್ರಧಾನ ಸಂಚಾಲಕ ಜಿ.ಬಸವರಾಜ ನಾಯಕ, ಸಮಿತಿ ಸದಸ್ಯ ಶಿವಪ್ಪ ಬಲ್ಲಿದ್, ಮಹಿಬೂಬ್, ಪರಶುರಾಮ ಮಾಗಡಿ ಇತರರಿದ್ದರು.