

ದೇವದುರ್ಗ: ಮಕ್ಕಳಲ್ಲಿ ಕಂಡುಬರುವ ನ್ಯೂಮೋನಿಯಾ ಮಾರಣಾಂತಿಕ ಕಾಯಿಲೆಯಾಗಿದೆ. ಈ ರೋಗ ನಿರ್ಮೂಲನೆಗೆ ಸಾರ್ವಜನಿಕರು ಆರೋಗ್ಯ ಇಲಾಖೆಗೆ ಸಹಕಾರ ನೀಡಿ ಬೆಂಬಲಿಸಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಹೇಳಿದರು.
ಪಟ್ಟಣದ ಸಾರ್ವಜನಿಕ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ನ್ಯೂಮೋನಿಯಾ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ನ್ಯೂಮೋನಿಯಾದಿಂದ ಉಸಿರಾಟದ ತೊಂದರೆ ಉಂಟಾಗಲಿದೆ. ಇದು ಸ್ವಾಶಕೋಶದಲ್ಲಿ ಉಂಟಾಗುವ ಕಾಯಿಲೆಯಾಗಿದ್ದು, ಇದಕ್ಕೆ ಐದು ವರ್ಷದೊಳಗಿನ ಮಕ್ಕಳು ಹೆಚ್ಚಾಗಿ ತುತ್ತಾಗುತ್ತಾರೆ. ಅತಿಯಾದ ಕೆಮ್ಮು, ಜ್ವರ, ನೆಗಡಿ, ಉಸಿರಾಟದ ತೊಂದರೆ ಈ ರೋಗದ ಲಕ್ಷಣಗಳು. ಇವು ಕಂಡುಬಂದರೆ ಸಮೀಪದ ಸಾರ್ವಜನಿಕ ಆಸ್ಪತ್ರೆಗೆ ಭೇಟಿನೀಡಿ ಸೂಕ್ತ ಚಿಕಿತ್ಸೆ ಹಾಗೂ ಸಲಹೆ ನೀಡಬೇಕು. ಈ ವಿಷಯವನ್ನು ಪಾಲಕರು ಗಂಭೀರವಾಗಿ ಪರಿಗಣಿಸಿ ಮಕ್ಕಳನ್ನು ಕಾಳಜಿ ಮಾಡಬೇಕು. ನ್ಯೂಮೋನಿಯಾ ನಿರ್ಮೂಲನೆ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.
ಆಯುಷ್ ವೈದ್ಯಾಧಿಕಾರಿ ನಿರ್ಮಲಾದೇವಿ ಮಾತನಾಡಿ, ಮುಗು ಜನಿಸಿದ ಒಂದು ಗಂಟೆಯೊಳಗೆ ತಾಯಿ ಹಾಲು ಕುಡಿಸಬೇಕು. ಆರು ತಿಂಗಳ ನಂತರ ಪೂರಕ ಆಹಾರ ನೀಡಬೇಕು. ಶುದ್ಧ ಕುಡಿವ ನೀರು, ಸ್ವಚ್ಛತೆ ಅಹಾರ ಸೇವನೆ ಮಾಡಬೇಕು. ಸ್ವಚ್ಛತೆ ಕಾಪಾಡಿಕೊಂಡರೆ ಉತ್ತಮ ಆರೋಗ್ಯ ಪಡೆಯಬಹುದು ಎಂದು ಹೇಳಿದರು.
ಡಾ.ನಾಗರಾಜ ಮಲ್ಕಾಪುರ, ಡಾ.ಸತ್ಯನಾರಾಯಣ, ಪತ್ರಕರ್ತ ನರಸಿಂಗ್‌ರಾವ್ ಸರ್ಕೀಲ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ನಾಗರಾಜ, ಇಮಾಮ್ ಇಟಗಿ, ನಾಗರಾಜ, ರೋಹಿತ್, ಮನೋಜ್, ರಂಗಮ್ಮ ಇತರರಿದ್ದರು.