

ದೇವದುರ್ಗ: ಉದ್ಯೋಗ ಖಾತ್ರಿ ಯೋಜನೆಯ ಜಾಬ್‌ಕಾರ್ಡ್‌ನಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಪಟ್ಟಣದ ತಾಪಂ ಕಚೇರಿ ಮುಂದೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ಸೋಮವಾರ ಪ್ರತಿಭಟನೆ ನಡೆಸಿತು.
ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಬೇಕಿದ್ದ ಗ್ರಾಪಂಗಳು, ಉದ್ಯೋಗ ಚೀಟಿಯಲ್ಲಿನ ತಾಂತ್ರಿಕ ಸಮಸ್ಯೆ ಮುಂದಿಟ್ಟು ಕೆಲಸ ನೀಡದೆ ವಂಚಿಸುತ್ತಿವೆ.
ನರೇಗಾ ಯೋಜನೆ ಸಮರ್ಪಕ ಅನುಷ್ಠಾನಗೊಳಿಸುವಂತೆ ಸರ್ಕಾರ ಮತ್ತು ಜಿಲ್ಲಾಡಳಿತ ಅನೇಕ ಕಾರ್ಯಕ್ರಮ, ಜಾಗೃತಿ ಸಭೆ ನಡೆಸುತ್ತಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಇದರಿಂದ ಕೂಲಿಕಾರರ ಕೆಲಸ ಇಲ್ಲದೆ ಮಹಾನಗರಗಳಿಗೆ ಗುಳೆ ಹೋಗುವಂತಾಗಿದೆ ಎಂದು ದೂರಿದರು.
ಕೂಡಲೇ ಜಿಲ್ಲಾದ್ಯಂತ ನರೇಗಾ ಯೋಜನೆ ಸಮರ್ಪಕ ಅನುಷ್ಠಾನಗೊಳಿಸಬೇಕು. ಅರ್ಜಿ ಸಲ್ಲಿಸಿದ ಎಲ್ಲರಿಗೂ ಕೆಲಸ ನೀಡಬೇಕು. ಜಾಬ್‌ಕಾರ್ಡ್‌ನಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆ ಸರಿಪಡಿಸಬೇಕು. ಜಾಲಹಳ್ಳಿ ಗ್ರಾಪಂನಲ್ಲಿ ಕೆಲಸ ನೀಡದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು.
ಮಸರಕಲ್, ಚಿಂಚೋಡಿ, ಪಲಕನಮರಡಿ ಮತ್ತಿತರಡೆ ಜಾಬ್‌ಕಾರ್ಡ್‌ಗಳನ್ನು ಮನಬಂದಂತೆ ಮಾಡಲಾಗಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯದರ್ಶಿ ಸಂಗಮೇಶ ಮೂಲಿಮನಿ, ಮುಖಂಡರಾದ ಶಿವನಗೌಡ ನಾಯಕ ಮದರಕಲ್, ಸುರೇಶಗೌಡ, ಶರಣಪ್ಪ, ನರಸಪ್ಪ, ತಮ್ಮಣ್ಣ, ನರೇಶ್, ಬಸವರಾಜ ಮೂಡಲಗುಂಡ, ವೀರೇಶ ಮದರಕಲ್, ಶಾಂತಕುಮಾರ್ ಮಕಾಶಿ, ಆನಂದ ಛಲವಾದಿ, ಯಲ್ಲಪ್ಪ ಗಚ್ಚಿನಮನಿ, ರಂಗಣ್ಣ ದೇವರಗುಡ್ಡ, ಮುದುಕಪ್ಪ ಇತರರಿದ್ದರು.