

ಜೀರ್ಣೋದ್ದಾರ ಕಾಮಗಾರಿಗೆ ಚಾಲನೆ
ದೇವದುರ್ಗ: ಶ್ರೀ ಆಂಜನೇಯ ದೇವಸ್ಥಾನದ ಕಾಮಗಾರಿಯನ್ನು ಶೀಘ್ರವೇ ಆರಂಭಿಸಿ ಗುಣಮಟ್ಟದಿಂದ ನಿರ್ಮಿಸಲಿ ಎಂದು ಶಾಸಕ ಕೆ.ಶಿವನಗೌಡ ನಾಯಕ ತಾಯಿ ಮಹಾದೇವಮ್ಮ ಹೇಳಿದರು.
ತಾಲೂಕಿನ ಹಿರೇಬೂದೂರು ಗ್ರಾಮದ ಶ್ರೀಆಂಜನೇಯ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಶಾಸಕ ಕೆ.ಶಿವನಗೌಡ ನಾಯಕ ಹಿರೇಬೂದೂರು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭ ಗ್ರಾಮಸ್ಥರು ಆಂಜನೇಯ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗೆ ಅನುದಾನ ನೀಡಲು ಕೋರಿದ್ದರು. ಆಗ ನೀಡಿದ ಭರವಸೆಯಂತೆ ದೇವಸ್ಥಾನ ಕಾಮಗಾರಿಗೆ 34 ಲಕ್ಷ ರೂ. ಶಾಸಕರ ಅನುದಾನದಲ್ಲಿ ನೀಡಲಾಗಿದೆ. ಅವರೇ ಖುದ್ದು ಬಂದು ಹಣ ನೀಡಬೇಕಿತ್ತು. ಅಧಿವೇಶನ ಇರುವ ಕಾರಣ ಅವರು ಬರಲಿಲ್ಲ. ಅವರ ಪರವಾಗಿ ನಾನು ಬಂದಿರುವೆ ಎಂದರು.
ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶಾಸಕ ಕೆ.ಶಿವನಗೌಡ ನಾಯಕ ಹಗಲೂ ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಮೂಲ ಸೌಲಭ್ಯ, ಶೈಕ್ಷಣಿಕ ಅಭಿವೃದ್ಧಿ, ದೇವಸ್ಥಾನಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.
ಜಿಪಂ ಸದಸ್ಯ ಪ್ರಕಾಶ್ ಪಾಟೀಲ್ ಜೇರಬಂಡಿ ಮಾತನಾಡಿ, ಶಾಸಕ ಕೆ.ಶಿವನಗೌಡ ನಾಯಕ ಗ್ರಾಮಸ್ಥರಿಗೆ ನೀಡಿದ ಭರವಸೆಯಂತೆ ಆಂಜನೇಯ ದೇವಸ್ಥಾನ ಕಾಮಗಾರಿಗೆ ಮುಂಗಡವಾಗಿ 4 ಲಕ್ಷ ರೂ.ನೀಡಿದ್ದಾರೆ. ಕಾಮಗಾರಿ ಪ್ರಾರಂಭ ಬಳಿಕ ಉಳಿದ ಹಣವನ್ನು ಹಂತ ಹಂತವಾಗಿ ನೀಡಲಾಗುವುದು. ಹಂಚಿನಾಳ ಗ್ರಾಮದ ಅಂಜನೇಯ ದೇವಸ್ಥಾನಕ್ಕೆ 5ಲಕ್ಷ ರೂ. ಮುಂಗಡವಾಗಿ ನೀಡಲಾಗಿದೆ. ಶಾಸಕರು ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಶಾಸಕರ ಪ್ರಯತ್ನದಿಂದ ಹಲವು ವರ್ಷಗಳಿಂದ ನನೆಗುದಿಗೆ ಬಿದಿದ್ದ ಗೂಗಲ್ ರಸ್ತೆ ಕಾಮಗಾರಿಯನ್ನೂ ಪ್ರಾರಂಭಿಸಲಾಗಿದೆ ಎಂದರು.
ಬಸವಂತ್ರಾಯಗೌಡ ಗೋಪದೇವರಹಳ್ಳಿ, ತಾಪಂ ಮಾಜಿ ಸದಸ್ಯ ಯಲ್ಲಪ್ಪ, ಶೇಖರಪ್ಪಗೌಡ ಬೂದಿನಾಳ, ಮಹೇಶ ಸಾಹುಕಾರ, ದಂಡಪ್ಪ ನಾಯಕ, ಮಹಾದೇವಪ್ಪ ತಾತಾ ಜೇರಬಂಡಿ, ವಿನೋದಕುಮಾರ ನಾಯಕ, ಶರಣಗೌಡ ಸುಂಕೇಶ್ವರಹಾಳ, ಪಿಡಿಒ ಕಿರಣಬಾಬು, ಬಸವರಾಜ ನಾಯಕ ಹದ್ದಿನಾಳ, ಗೋಕಪ್ಪಗೌಡ, ಗೋವಿಂದರೆಡ್ಡಿ ಇದ್ದರು.