

ದೇವದುರ್ಗ: ಗ್ರಾಮೀಣ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಚೈಲ್ಡ್ ಫಂಡ್ ಇಂಡಿಯಾ ಸಂಸ್ಥೆ ಹಲವು ಯೋಜನೆ ಜಾರಿಗೊಳಿಸಿದ್ದು, ಈಗ ಸಹಾಯಧನ ನೀಡುತ್ತಿದ್ದು ಅದನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕೆಂದು ಸಂಸ್ಥೆಯ ತರಬೇತುದಾರ ಬಸವರಾಜ ಬೆಲ್ಲಮ್ ಹೇಳಿದರು.
ತಾಲೂಕಿನ ನಾಗಡದಿನ್ನಿ ಗ್ರಾಮದಲ್ಲಿ ಚೈಲ್ಡ್ ಫಂಡ್ ಇಂಡಿಯಾ ಸಂಸ್ಥೆಯ ಮಹಿಳಾ ಉದ್ಯಮಶೀಲ ಯೋಜನೆಯಡಿ ಆಯೋಜಿಸಿದ್ದ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಸ್ವ ಉದ್ಯೋಗ ಕೈಗೊಳ್ಳಲು ಪ್ರತಿ ಮಹಿಳೆಯರಿಗೆ 12ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. ಈ ಕಾರ್ಯಕ್ರಮದಡಿ 73 ಮಹಿಳೆಯರು ಆಯ್ಕೆಯಾಗಿದ್ದಾರೆ ಎಂದರು.
ಸಂಸ್ಥೆಯ ಸಮುದಾಯ ಸಂಘಟಕಿ ಶಂಶಾದ್‌ಬೇಗಂ ನಾಗಡದಿನ್ನಿ ಮಾತನಾಡಿ, ಸ್ವ ಉದ್ಯೋಗ ಕಲ್ಪಿಸಿಕೊಳ್ಳಲು ಮಹಿಳಾ ಉದ್ಯಮಶೀಲ ಕಾರ್ಯಕ್ರಮದಡಿ ಒಟ್ಟು 1 ಸಾವಿರ ಮಹಿಳೆಯರಿಗೆ ಧನ ಸಹಾಯ ಮಾಡಲಾಗುತ್ತಿದೆ. ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ನಾಲ್ಕು ದಿನಗಳ ಕಾಲ ಉಚಿತ ತರಬೇತಿ ನೀಡಲಾಗುವುದು. ಟೈಲರಿಂಗ್, ಮೈಕ್ರೋಶಾಪ್, ಹೈನುಗಾರಿಕೆ ಇತರ ಆಸಕ್ತದಾಯಕ ಉದ್ಯೋಗ ಮಾಡಬಹುದು. ಇದರಿಂದ ಕುಟುಂಬಕ್ಕೆ ನೆರವಾಗಲಿದೆ ಎಂದರು.
ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ವಿಜಯ್ ಕುಮಾರ್, ಎಸ್ಡಿಎಂಸಿ ಅಧ್ಯಕ್ಷ ಹನುಮಂತ್ರಾಯ ಕರ್ನಾಳ್, ಸುಮುದಾಯ ಸಂಘಟಕ ಸುಶೀಲ್ ಕುಮಾರ್, ನೇತ್ರಾ, ಅಂಗನವಾಡಿ ಕಾರ್ಯಕರ್ತೆಯರಾದ ನಿರ್ಮಲಾ, ದುರುಗಮ್ಮ, ಅನುಸೂಯ ಪಾಟೀಲ್ ಇತರರಿದ್ದರು.